ಒಂದೇ ಹೆರಿಗೆಯಲ್ಲಿ ಜನಿಸಿದ ಆರು ಬಿಳಿ ಹುಲಿ ಮರಿಗಳನ್ನು ನೋಡಲು ಚೀನಾದ ಮಂದಿ ಕಾತರರಾಗಿದ್ದಾರೆ. ರಾಯಲ್ ಬೆಂಗಾಲ್ ಹುಲಿ ಜಾತಿಯ ಹೆಣ್ಣು ಹುಲಿಯೊಂದು ಇಲ್ಲಿನ ಜಿಂಗ್‌ಜಿಂಗ್ ಸ್ಥಳೀಯ ಎಂಜಾಯ್ ಲ್ಯಾಂಡ್ ಸಂರಕ್ಷಣೆ ಹಾಗೂ ಶೈಕ್ಷಣಿಕ ಕೇಂದ್ರ ಮೃಗಾಲಯವೊಂದರಲ್ಲಿ ಆರು ಬಿಳಿ ಮರಿಗಳಿಗೆ ಜನ್ಮವಿತ್ತಿದೆ.
ಸಾಮಾನ್ಯವಾಗಿ ಬಿಳಿ ಹುಲಿಗಳು ಒಮ್ಮೆಗೆ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ. ಒಮ್ಮೆಲೆ ಆರು ಮರಿ ಹಾಕುವುದು ಹುಲಿಗಳಲ್ಲಿ ಭಾರೀ ಅಪರೂಪವಾಗಿದೆ. ಈ ಆರು ಮರಿಗಳ ಪೈಕಿ, ನಾಲ್ಕು ಗಂಡು ಹಾಗೂ ಎರಡು ಹೆಣ್ಣು ಮರಿಗಳಾಗಿವೆ.
ಸಾಮಾನ್ಯವಾಗಿ ಕಿತ್ತಳೆ ಬಣ್ಣದ ಮೈ ಹೊಂದಿರುವ ಈ ಹುಲಿಗಳಲ್ಲಿ ಒಮ್ಮೊಮ್ಮೆ ವಂಶವಾಹಿಗಳ ವರ್ಗಾವಣೆ ಸಂಭವಿಸುವ ಗೊಂದಲದಿಂದ ಹೀಗೆ ಆಲ್ಬಿನೋ (ಬಿಳಿ) ಹುಲಿಗಳು ಜನಿಸುತ್ತವೆ.
ಚೀನಾದಲ್ಲಿ ಬಿಳಿ ಹುಲಿಗಳು ರಾಷ್ಟ್ರೀಯ ಸಂರಕ್ಷಿತ ಪ್ರಾಣಿಗಳಾಗಿದ್ದು, ಅವುಗಳ ಸಂರಕ್ಷಣೆಗೆ ಭಾರೀ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತದೆ.