
ಎಟಿಎಂ ಕಾರ್ಡ್ ಟ್ರ್ಯಾಪ್ ಹೆಸರಿನ ಹೊಸ ಎಟಿಎಂ ಹಗರಣವೊಂದು ಬೆಳಕಿಗೆ ಬಂದಿದೆ. ಇದು ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಲು ಕಳ್ಳರು ಬಳಸುವ ವಂಚನೆಯ ಹೊಸ ವಿಧಾನವಾಗಿದೆ. ಈ ವಂಚನೆ ಯಾವ ರೀತಿ ಇರುತ್ತದೆ? ಅದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ನೋಡೋಣ.
ಟ್ಯಾಂಪರ್ಡ್ ಎಟಿಎಂ: ಎಟಿಎಂ ಕಾರ್ಡ್ ರೀಡರ್ ಅನ್ನು ಕಳ್ಳರು ಬಳಸಿಕೊಳ್ತಾರೆ. ಕಾರ್ಡ್ ಮಾಹಿತಿಯನ್ನು ಕದಿಯುವ ಸ್ಕ್ಯಾನಿಂಗ್ ಸಾಧನವನ್ನು ಅಳವಡಿಸಿ, ಸಂಪೂರ್ಣ ರೀಡರ್ ಅನ್ನು ತೆಗೆದು ಹಾಕುತ್ತಾರೆ. ಇದರಿಂದಾಗಿ ಗ್ರಾಹಕರ ಎಟಿಎಂ ಕಾರ್ಡ್ ಮಷಿನ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ.
ಸಹಾಯ ಮಾಡುವಂತೆ ನಟಿಸುವುದು: ಕಾರ್ಡ್ ಸಿಕ್ಕಿಹಾಕಿಕೊಳ್ಳುತ್ತಿದ್ದಂತೆ ವಂಚಕರು ಸಹಾಯ ಮಾಡುವ ನೆಪದಲ್ಲಿ ಬರುತ್ತಾರೆ. ಆ ಸಂದರ್ಭವನ್ನು ಬಳಸಿಕೊಂಡು ಮೋಸ ಮಾಡುತ್ತಾರೆ.
ಪಿನ್ ಕಳ್ಳತನ: ಎಟಿಎಂ ಕಾರ್ಡ್ ಪಿನ್ ಅನ್ನು ಮತ್ತೊಮ್ಮೆ ಹಾಕುವಂತೆ ವಂಚಕರು ಕೇಳಬಹುದು. ಆಗ ಕಾರ್ಡ್ ರಿಲೀಸ್ ಆಗುತ್ತದೆ. ಈ ಸಮಯದಲ್ಲಿ ಅವರು ಪಿನ್ ನೋಡಿಕೊಳ್ಳುತ್ತಾರೆ. ಇಲ್ಲದೇ ಹೋದಲ್ಲಿ ಬ್ಯಾಂಕ್‌ಗೆ ಕರೆ ಮಾಡಲು ಸೂಚಿಸಬಹುದು.
ವ್ಯಾಕುಲತೆ: ಗ್ರಾಹಕರ ಗಮನವನ್ನು ಬೇರೆಡೆಗೆ ಸೆಳೆಯುವುದು ಮತ್ತು ಎಟಿಎಂನಿಂದ ಹೊರತರುವುದು ಅವರ ನಿಜವಾದ ಉದ್ದೇಶ. ಇದರಿಂದಾಗಿ ಒಳಗೆ ಸಿಕ್ಕಿಹಾಕಿಕೊಂಡಿರುವ ಕಾರ್ಡ್ ಅನ್ನೇ ಗ್ರಾಹಕರು ಮರೆತುಬಿಡುತ್ತಾರೆ.
ಖಾತೆಯಲ್ಲಿದ್ದ ಹಣ ಖಾಲಿ ಮಾಡುವುದು: ಗ್ರಾಹಕರು ಎಟಿಎಂನಿಂದ ಹೊರಬೀಳುತ್ತಿದ್ದಂತೆ ಕಳ್ಳರು ಕಾರ್ಡ್ ಅನ್ನು ತೆಗೆದುಕೊಳ್ತಾರೆ, ಕದ್ದ ಪಿನ್ ಅನ್ನು ಬಳಸಿಕೊಂಡು ಖಾತೆಯಲ್ಲಿದ್ದ ಹಣವನ್ನು ವಿತ್‌ಡ್ರಾ ಮಾಡಿಬಿಡುತ್ತಾರೆ.
ಎಟಿಎಂ ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?
ಎಟಿಎಂ ಅನ್ನು ಪರೀಕ್ಷಿಸಿ: ಎಟಿಎಂನಿಂದ ಹಣ ಪಡೆಯುವ ಮುನ್ನ ಸುತ್ತಮುತ್ತ ಪರೀಕ್ಷಿಸಿಕೊಳ್ಳಿ. ಕಾರ್ಡ್ ಸಿಕ್ಕಿಹಾಕಿಕೊಂಡಾಗ ಆ ಸ್ಥಳದ ಸುತ್ತ ಯಾವುದೇ ಅಕ್ರಮಗಳು ಅಥವಾ ಅನುಮಾನಾಸ್ಪದ ವಸ್ತುಗಳಿವೆಯೇ ಎಂಬುದನ್ನು ಗಮನಿಸಿ. ಮುರಿದ ಅಥವಾ ಸಡಿಲವಾದ ಭಾಗಗಳು ಅಥವಾ ಗುಪ್ತ ಕ್ಯಾಮೆರಾ ಇದೆಯೇ ಎಂಬುದನ್ನು ಪರೀಕ್ಷಿಸಿ.
ಅಪರಿಚಿತರನ್ನು ಅವಲಂಬಿಸಬೇಡಿ: ಎಟಿಎಂ ಮಷಿನ್‌ನಲ್ಲಿ ಕಾರ್ಡ್ ಸಿಕ್ಕಿಹಾಕಿಕೊಂಡರೆ, ಸಹಾಯಕ್ಕಾಗಿ ಯಾವುದೇ ಅಪರಿಚಿತರನ್ನು ಅವಲಂಬಿಸಬೇಡಿ.
ಪಿನ್ ಶೇರ್ ಮಾಡಬೇಡಿ: ಎಟಿಎಂ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಅದು ಬ್ಯಾಂಕ್‌ನಿಂದ ಬಂದಿದ್ದರೂ ಸಹ. ಬ್ಯಾಂಕ್ ಸಿಬ್ಬಂದಿ ಫೋನ್ ಮೂಲಕ ಅಥವಾ ವೈಯಕ್ತಿಕವಾಗಿ ಎಟಿಎಂ ಪಿನ್ ಅನ್ನು ಎಂದಿಗೂ ಕೇಳುವುದಿಲ್ಲ.
ಎಟಿಎಂ ಕಾರ್ಡ್ ಸಿಲುಕಿಕೊಂಡರೆ ಬ್ಯಾಂಕ್‌ನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ. ಕಾರ್ಡ್‌ನ ಹಿಂಭಾಗದಲ್ಲಿ ಅಥವಾ ಬ್ಯಾಂಕ್‌ನ ಅಪ್ಲಿಕೇಶನ್‌ನಲ್ಲಿ ನಂಬರ್ ಲಭ್ಯವಿರುತ್ತದೆ. ಅಥವಾ ಬ್ಯಾಂಕ್‌ನ ಅಧಿಕೃತ ಅಪ್ಲಿಕೇಶನ್ ಮೂಲಕ ನೇರವಾಗಿ ಬ್ಯಾಂಕ್ ಅನ್ನು ಸಂಪರ್ಕಿಸಿ.
ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುವ ಉತ್ತಮ ಬೆಳಕಿನ ಪ್ರದೇಶಗಳಲ್ಲಿ ಇರುವ ಎಟಿಎಂಗಳನ್ನು ಬಳಸಿ. ಸಾಧ್ಯವಾದರೆ, ಬ್ಯಾಂಕ್ ತೆರೆದಿರುವಾಗ ಮಾತ್ರ ಬ್ಯಾಂಕ್ ಶಾಖೆಯೊಳಗಿನ ಎಟಿಎಂ ಬಳಸಿ. ಯಾವುದೇ ಎಟಿಎಂ ಟ್ಯಾಂಪರ್ ಆಗಿರುವುದು ಕಂಡು ಬಂದರೆ ತಕ್ಷಣ ಬ್ಯಾಂಕ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿ.