ಈ ಬಾರಿಯ ಲೋಕಸಭಾ ಚುನಾವಣೆ ಮತದಾನ 7 ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ನಾಲ್ಕು ಹಂತದ ಮತದಾನ ಪೂರ್ಣಗೊಂಡಿದೆ. ಜೂನ್ ನಾಲ್ಕರಂದು ಫಲಿತಾಂಶ ಪ್ರಕಟಗೊಳ್ಳಲಿದ್ದು, ಯಾರಿಗೆ ಅಧಿಕಾರ ಸಿಗಲಿದೆ ಎಂಬ ಕುತೂಹಲ ದೇಶದ ಜನರಲ್ಲಿ ಮನೆ ಮಾಡಿದೆ.
ಬಿಜೆಪಿ ನೇತೃತ್ವದ ಎನ್.ಡಿ.ಎ ಒಕ್ಕೂಟ ಹಾಗೂ ವಿಪಕ್ಷಗಳ I.N.D.I.A ಒಕ್ಕೂಟದ ನಡುವೆ ಜಿದ್ದಾಜಿದ್ದಿನ ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮೊದಲಾದವರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣ ಮೂಲ ಕಾಂಗ್ರೆಸ್, ವಿಪಕ್ಷಗಳ I.N.D.I.A ಒಕ್ಕೂಟ ಸೇರದೆ ಏಕಾಂಗಿಯಾಗಿ ಸ್ಪರ್ಧಿಸಿದ್ದು, ಒಂದು ವೇಳೆ I.N.D.I.A ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದೆ. ಈ ಕುರಿತಂತೆ ಸುಳಿವು ನೀಡಿರುವ ಮಮತಾ ಬ್ಯಾನರ್ಜಿ I.N.D.I.A ಒಕ್ಕೂಟ ಅಧಿಕಾರಕ್ಕೆ ಬಂದರೂ ಟಿಎಂಸಿ, ಸಚಿವ ಸಂಪುಟ ಸೇರ್ಪಡೆಗೊಳ್ಳುವುದಿಲ್ಲ ಎಂಬ ಸೂಚನೆ ನೀಡಿದ್ದಾರೆ.