ಬೆಂಗಳೂರು : ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳ 2024-25 ನೇ ಸಾಲಿನ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಿ ಅವಕಾಶ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
2024-25ನೇ ಸಾಲಿಗೆ ಖಾಸಗಿ ಶಾಲೆಗಳ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣಕ್ಕೆ ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಸಲು ಉಲ್ಲೇಖ(6)ರ ಸುತ್ತೋಲೆ ನೀಡಲಾಗಿತ್ತು.ಉಲ್ಲೇಖ(8)ರ ದಿನಾಂಕ:09-01-2025 ಸುತ್ತೋಲೆಯಂತೆ ಶಾಲಾ ಆಡಳಿತ ಮಂಡಳಿಗಳಿಗೆ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣಕ್ಕೆ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ದಿನಾಂಕ:10-01-2025 ರಿಂದ 31-01-2025ರವರೆಗೆ ಅವಧಿ ವಿಸ್ತರಿಸಿ ಅವಕಾಶ ನೀಡಲಾಗಿತ್ತು. ಆದಾಗ್ಯೂ ಕೆಲವು ಶಾಲೆಗಳು 2024-25ನೇ ಸಾಲಿನಲ್ಲಿ ನೀಡಿದ ಕಾಲಾವಧಿಯಲ್ಲಿ ಮಾನ್ಯತೆ ಪಡೆಯಲು ವಿಫಲರಾಗಿರುವುದು ಹಾಗೂ ಹಲವು ಶಾಲೆಗಳ ಮಾನ್ಯತೆ ಕೋರಿ ಸಲ್ಲಿಸಿದ ಅರ್ಜಿಗಳು ದಾಖಲೆ/ಮಾಹಿತಿಗಳ ಕೊರತೆಯ ಕಾರಣದಿಂದ ತಿರಸ್ಕೃತಗೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ 2024-25ನೇ ಸಾಲಿಗೆ ಮಾನ್ಯತೆ/ಮಾನ್ಯತೆ ನವೀಕರಣ ಪಡೆಯಲು ಖಾಸಗಿ ಅನುದಾನಿತ/ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಮಾನ್ಯತೆ ನವೀಕರಣ ಮಾಡಿಕೊಳ್ಳುವ ಮತ್ತು ಆ ರೀತಿ ಮಾನ್ಯತೆ ನವೀಕರಣ ಮಾಡಿಕೊಳ್ಳಲು ವಿಫಲರಾಗುವ ಶಾಲೆಗಳ ನೊಂದಣಿಯನ್ನು ನಿಯಮಾನುಸಾರ ರದ್ದುಪಡಿಸುವ ಮತ್ತು ಮಾನ್ಯತೆಯನ್ನು ಹಿಂಪಡೆಯುವ ಷರತ್ತಿಗೊಳಪಡಿಸಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೊನೆಯ ಬಾರಿಗೆ ಮಾತ್ರ 2024-25ನೇ ಸಾಲಿನ ಮಾನ್ಯತೆ ನವೀಕರಣಕ್ಕೆ ಮಾತ್ರ ಅವಕಾಶ ನೀಡಲು ತೀರ್ಮಾನಿಸಿದೆ.


