ಬೆಂಗಳೂರು : ರಾಜ್ಯದ ವಿವಿಧೆಡೆ ಖಾಲಿ ಇರುವ ಸಮುದಾಯ ಅಧಿಕಾರಿ ಹುದ್ದೆಗಳ ಭರ್ತಿಗೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಸದ್ಯ ಇದರ ದಿನಾಂಕವನ್ನು ವಿಸ್ತರಿಸಲಾಗಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಇನ್ನಿತರ ಕಾರಣಗಳಿಂದಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ವಿಸ್ತರಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಷ್ಕೃತ ವೇಳಾ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಅವಧಿ ವಿಸ್ತರಣೆ ಮಾಡಿದ್ದು ಜ. 30ರೊಳಗೆ ಅರ್ಜಿ ಸಲ್ಲಿಸಬೇಕು. ಆನ್ ಲೈನ್ ಮೂಲಕವೇ ಪರೀಕ್ಷೆಗಳು ನಡೆಯಲಿದ್ದು, ಫೆಬ್ರವರಿ 1ರಂದು ಎಸ್ಎಂಎಸ್ ಮೂಲಕ ಅಡ್ಮಿಟ್ ಕಾರ್ಡ್ ಗಳನ್ನು ಪ್ರಕಟಿಸಲಾಗುವುದು. ಆನ್ ಲೈನ್ ಮೂಲಕವೇ ಫೆ. 4ರಂದು ಪರೀಕ್ಷೆಗಳು ನಡೆಯಲಿವೆ.
ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆಯು ಫೆ. 7ರಂದು ನಡೆಯಲಿದ್ದು, ತಾತ್ಕಾಲಿಕ ಅಂಕ ಪಟ್ಟಿಯು ಫೆಬ್ರವರಿ 9ರಂದು ಬಿಡುಗಡೆಯಾಗಲಿದೆ. ಡಿ ಎಚ್ ಓ, ಜಿಪಂ ಹಾಗೂ ಸಿಇಓ ಹಂತದಲ್ಲಿ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಲಾಗುತ್ತದೆ. ಅಲ್ಲದೇ, ಆಯ್ಕೆ ಪಟ್ಟಿಯು ಫೆ. 18ರಂದು ಬಿಡುಗಡೆಯಾಗಲಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬಿಎಸ್ಸಿ ನರ್ಸಿಂಗ್ ಪೂರೈಸಿರಬೇಕು. ಅಲ್ಲದೇ, ರಾಜ್ಯ ನರ್ಸಿಂಗ್ ಕೌನ್ಸಿಲ್ ಐ ಎನ್ ಸಿ ಹಾಗೂ ರಾಜ್ಯ ನರ್ಸಿಂಗ್ ಕೌನ್ಸಿಲ್ ನಿಂದ ನೊಂದಣಿ ಹೊಂದಿರಬೇಕು.
ಅರ್ಜಿ ಸಲ್ಲಿಕೆಗೆ ಕನಿಷ್ಠ 18 ವರ್ಷವಿದ್ದು, ಗರಿಷ್ಠ ವಯೋಮಿತಿ ಬೇರೆ ಬೇರೆ ವರ್ಗದ ಜನರಿಗೆ ಬೇರೆಯಾಗಿರುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಮಾಜಿ ಸೈನಿಕರು, ಎಸ್ಸಿ, ಎಸ್ಟಿ ಹಾಗೂ ಕ್ಯಾಟ್ -1 ನ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ನಿಗದಿಗೊಳಿಸಲಾಗಿದೆ. ಅಭ್ಯರ್ಥಿಗಳು ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸದ ದೃಢೀಕರಣ ಪತ್ರ ಹೊಂದಿರಬೇಕು. ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳ ಮೇಲೆ ಹಿಡಿತ ಸಾಧಿಸಿರಬೇಕು.