ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸಂತ್ರಸ್ತಯೊಬ್ಬರ ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು ಬಂಧನಕ್ಕೊಳಪಡಿಸಲಾಗಿದೆ.
ಲೋಕಸಭಾ ಚುನಾವಣೆ ಮುಗಿದ ದಿನವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದು, ವಿಚಾರಣೆಗೆ ಅವರನ್ನು ಕರೆತರಲು ಎಸ್ಐಟಿ ತಂಡ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದ್ದು, ಇಂಟರ್ ಪೋಲ್ ಸಹಕಾರ ಪಡೆದು ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆಯುವ ನಿರೀಕ್ಷೆಯಲ್ಲಿ ಎಚ್ಐಟಿ ತಂಡ ಇದೆ.
ಇದರ ಮಧ್ಯೆ ಪ್ರಕರಣ ಬಹಿರಂಗವಾಗುತ್ತಲೇ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ನಿಂದ ಅಮಾನತುಗೊಳಿಸಲಾಗಿದ್ದು, ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ನಾಳೆ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಯಲಿದ್ದು, ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ನಿಂದ ಉಚ್ಛಾಟಿಸುವ ಕುರಿತಂತೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.