ಕೇವಲ ಶೀತ ಅಥವಾ ಸ್ವಲ್ಪ ಜ್ವರ ಮಾತ್ರ ಉದ್ಭವಿಸುವಂತೆ ಮಾಡುವ ಕೊರೊನಾ ವೈರಾಣು ರೂಪಾಂತರಿಗಳು ನಮ್ಮ ದೇಹಕ್ಕೆ ಸೋಕಿದಲ್ಲಿ, ಅವುಗಳಿಂದಾಗಿ ಮಾರಣಾಂತಿಕವಾದ ಕೋವಿಡ್-19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಶಕ್ತಿ ದೇಹಕ್ಕೆ ಲಭಿಸುತ್ತದೆ ಎಂದು ಹೊಸ ಅಧ್ಯಯನವೊಂದು ದೃಢಪಡಿಸಿದೆ. ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಸಂಶೋಧನಾ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದೆ.
ಜ್ಯೂರಿಚ್ ವಿಶ್ವವಿದ್ಯಾಲಯದಲ್ಲಿ ಈ ವಿಶೇಷ ಸಂಶೋಧನೆ ನಡೆಸಲಾಗಿದ್ದು, ಇದರಿಂದಾಗಿ ಕೊರೊನಾ ನಿಯಂತ್ರಣಕ್ಕೆ ಅಗತ್ಯವಾದ ಸಮುದಾಯ ನಿರೋಧಕತೆ ವೃದ್ಧಿಸಲು ಸಾಧ್ಯ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಂದು ದುರ್ಬಲ ಕೊರೊನಾ ವೈರಾಣುವಿನ ರೂಪಾಂತರಿಯು ದೇಹ ಹೊಕ್ಕ ಕೂಡಲೇ, ರೋಗನಿರೋಧಕ ಶಕ್ತಿಯು ಯಾವ ಮಟ್ಟಿಗೆ ಎಚ್ಚರಗೊಳ್ಳುತ್ತದೆ ಎಂದರೆ, ಮುಂದೆ ಅಪಾಯಕಾರಿ ಕೋವಿಡ್-19 ದೇಹಕ್ಕೆ ಪ್ರವೇಶಿಸಿದಲ್ಲಿ ಪ್ರಬಲ ಪ್ರತಿರೋಧವನ್ನು ದೇಹ ಒಡ್ಡಬಲ್ಲದು. ಸಾರ್ಸ್ -ಸಿಒವಿ-2 ಮಾದರಿಯ ಬಹುತೇಕ ಸೋಂಕಿಗೆ ಈ ರೋಗ ನಿರೋಧಕ ಶಕ್ತಿಯೇ ರಾಮಬಾಣವಾಗಿ ಕೆಲಸ ಮಾಡಲಿದೆ.
ಜನಸಾಮಾನ್ಯರಿಗೆ ಬಿಗ್ ಶಾಕ್: ಸಾರ್ವಕಾಲಿಕ ದಾಖಲೆ ಬರೆದ ಟೊಮೆಟೊ ದರ; 15 ಕೆಜಿ ಬಾಕ್ಸ್ ಗೆ 3100 ರೂ.
ಒಟ್ಟು ನಾಲ್ಕು ಮಾದರಿಯ ಸಾಮಾನ್ಯ, ಅಪಾಯಕಾರಿ ಅಲ್ಲದ ಕೊರೊನಾ ರೂಪಾಂತರಿಗಳನ್ನು 825 ಜನರ ದೇಹಕ್ಕೆ ನುಗ್ಗಿಸಿ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಕೆಲವೇ ದಿನಗಳಲ್ಲಿ ಅವರ ದೇಹದಲ್ಲಿ ಯಾವ ಮಟ್ಟಿನ ರೋಗನಿರೋಧಕತೆ ವೃದ್ಧಿಯಾಗಿದೆ ಎಂದರೆ, ಕೋವಿಡ್-19 ವೈರಾಣುವನ್ನು ಕ್ಷಣ ಮಾತ್ರದಲ್ಲಿ ಹತ್ತಿಕ್ಕುವಷ್ಟು ದೇಹವು ಎಚ್ಚರಗೊಂಡಿದೆ. ಹಾಗಂತ , ಕೋವಿಡ್-19ನಿಂದ ಜ್ವರ, ಶೀತ ಕಾಣಿಸಿಕೊಳ್ಳಲ್ಲ ಎಂದೇನಿಲ್ಲ. ಆದರೆ, ಅದರ ಭೀಕರತೆ ಅಥವಾ ಪರಿಣಾಮ ಕೇವಲ 1-2 ದಿನಗಳು ಮಾತ್ರ ಇರಲಿದೆ. ಸ್ವಿಸ್ ರೆಡ್‌ಕ್ರಾಸ್, ಸ್ವಿಸ್ ನ್ಯಾಷನಲ್ ಸೈನ್ಸ್ ಫೌಂಡೇಷನ್ ಮತ್ತು ಜೀಲೀಡ್ ಔಷಧ ತಯಾರಿಕೆ ಸಂಸ್ಥೆಯು ಈ ಸಂಶೋಧನೆಗೆ ನೆರವಾಗಿವೆ.