ಬಾಲಕನೊಬ್ಬ ತೋಟದಲ್ಲಿ ಏನನ್ನೋ ಹುಡುಕುತ್ತಿದ್ದ ಸಂದರ್ಭದಲ್ಲಿ ವಿಶ್ವ ಸಮರ-2 ಗ್ರೆನೇಡ್ ಸಿಕ್ಕಿರುವ ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ. 9 ವರ್ಷದ ಬಾಲಕನಿಗೆ ಇದು ಸಿಕ್ಕಿದ್ದು, ಈ ನಿಟ್ಟಿನಲ್ಲಿ ಈಗ ಸಂಶೋಧನೆ ನಡೆದಿದೆ.
ಸ್ಫೋಟಕ ಸಿಕ್ಕ ಕೂಡಲೇ ಈತ ಮನೆಗೆ ಬಂದು ಪಾಲಕರಿಗೆ ವಿಷಯ ತಿಳಿಸಿದ್ದಾನೆ. ಯಾರ್ಕೊಂಬೆಯ ಜಾರ್ಜ್ ಪೆನಿಸ್ಟನ್-ಬರ್ಡ್ ಎಂಬ 9 ವರ್ಷದ ಬಾಲಕನ ಅಮ್ಮ ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಅದನ್ನು ವಶಪಡಿಸಿಕೊಂಡಿದ್ದಾರೆ.
ಮಗ ಬಂದು ಈ ವಿಷಯ ತಿಳಿಸಿದಾಗ ರಾತ್ರಿಯಾಗಿತ್ತು. ನಾವೆಲ್ಲರೂ ಬೆಚ್ಚಿ ಬಿದ್ದೆವು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಲಾಯಿತು ಎಂದು ಬಾಲಕನ ಅಮ್ಮ ತಿಳಿಸಿದ್ದಾರೆ. ಇದು ಗ್ರೆನೇಡ್ ಎಂದು ಕಂಡುಬಂದಿದ್ದು, ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೈನಿಕರು ವಸ್ತುವಿನ ಎಕ್ಸ್-ರೇ ತೆಗೆದರು ಮತ್ತು ಸ್ಫೋಟಕ ಇನ್ನೂ ಜೀವಂತವಾಗಿರುವುದನ್ನು ಕಂಡುಹಿಡಿದಿದ್ದಾರೆ. ಪೊಲೀಸರು ಇದನ್ನು ‘ಸ್ಫೋಟಗೊಳ್ಳದ ಎರಡನೇ ಮಹಾಯುದ್ಧದ ಗ್ರೆನೇಡ್’ ಎಂದು ಹೇಳಿದ್ದಾರೆ. ನಂತರ ಅದನ್ನು ಸಮೀಪದ ಹೊಲಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಸ್ಫೋಟಿಸಲಾಗಿದೆ.