ಕೀವ್: ರಷ್ಯಾದ ಭೀಕರ ದಾಳಿಗೆ ಉಕ್ರೇನ್ ತತ್ತರಿಸಿಹೋಗಿದ್ದು, 137 ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಉಕ್ರೇನ್ ಬಹುತೇಕ ಭಾಗಗಳಲ್ಲಿ ರಕ್ತಪಾತ ನಡೆದಿದ್ದು, ಕಟ್ಟಡಗಳು, ಬ್ರಿಡ್ಜ್, ಸೇನಾ ನೆಲೆಗಳು ರಷ್ಯಾ ದಾಳಿಗೆ ಸಂಪೂರ್ಣ ಭಸ್ಮವಾಗಿವೆ. ಈ ನಡುವೆ ಉಕ್ರೇನ್ ರಾಜಧಾನಿ ಕೀವ್ ಗೆ ರಷ್ಯಾ ಮಿಲಿಟರಿ ಪಡೆಗಳು ಲಗ್ಗೆಯಿಟ್ಟಿವೆ.
ಉಕ್ರೇನ್ ನ ಕೀವ್ ಸಿಟಿಗೆ ಲಗ್ಗೆಯಿಟ್ಟ ರಷ್ಯಾ ಸೇನೆ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿದೆ. ರಷ್ಯಾ ಸೇನೆ ಹಾಗೂ ಉಕ್ರೇನ್ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ನಾಗರಿಕರು ದಿಕ್ಕಾಪಾಲಾಗಿ ಓಡಿದ್ದಾರೆ. ಯಾವುದೇ ಕ್ಷಣದಲ್ಲಿ ರಷ್ಯಾ, ಕೀವ್ ಸಿಟಿ ವಶಪಡಿಸಿಕೊಳ್ಳುವ ಸಾಧ್ಯತೆ ಇದೆ.
ಕೀವ್ ಗೆ ರಷ್ಯಾ ಮಿಲಿಟರಿ ಪಡೆ ಆಗಮಿಸುತ್ತಿದ್ದಂತೆ ಉಕ್ರೇನ್ ಸೇನಾಧಿಕಾರಿಗಳು ದೇಶದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ರಷ್ಯಾ ಕೈಗೆ ಸಿಗದಂತೆ ನಾಶಪಡಿಸಿದ್ದಾರೆ. ರಕ್ಷಣಾ ಇಲಾಖೆ ದಾಖಲೆ ಪತ್ರಗಳನ್ನು ವಾಹನಗಳಲ್ಲಿ ತಂದು ಬೆಂಕಿ ಹಚ್ಚಿ ಸುಟ್ಟಿದ್ದಾರೆ.
ಮತ್ತೊಂದೆಡೆ ಬಲಾಡ್ಯ ರಷ್ಯಾ ಸೇನೆಗೆ ತಿರುಗೇಟು ನೀಡುತ್ತಿರುವ ಉಕ್ರೇನ್ ಪ್ರತಿ ದಾಳಿ ನಡೆಸಿ ರಷ್ಯಾದ ಶಸ್ತ್ರ ಸಜ್ಜಿತ ವಾಹನಗಳನ್ನು ನಾಶಪಡಿಸಿದೆ. ರಷ್ಯಾದ 800 ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ಅಧ್ಯಕ್ಷರು ತಿಳಿಸಿದ್ದು, 96 ಗಂಟೆಯೊಳಗೆ ಉಕ್ಕಿನ ಕೋಟೆ ನಿರ್ನಾಮ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ಇಡೀ ಉಕ್ರೇನ್ ನ್ನು ಕೈವಶ ಪಡೆಯಲು ರಷ್ಯಾ ಸರ್ವ ಸನ್ನದ್ಧವಾಗಿದೆ ಎಂದು ತಿಳಿದುಬಂದಿದೆ.