ಸಾಮಾನ್ಯವಾಗಿ ಜೂನ್ನಲ್ಲಿ ಆರಂಭವಾಗುತ್ತಿದ್ದ ಮಳೆಗಾಲ ಸೆಪ್ಟೆಂಬರ್ ವೇಳೆಗೆಲ್ಲ ಅಂತ್ಯವಾಗಿ ಬಿಡುತ್ತಿತ್ತು. ಆದರೆ ಈ ಬಾರಿ ಮಾತ್ರ ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂದರೂ ದೇಶದ ವಿವಿಧೆಡೆ ಮಳೆಯ ಆರ್ಭಟ ಕೇಳಿ ಬರುತ್ತಲೇ ಇದೆ. ಕಳೆದ ಕೆಲ ದಿನಗಳಲ್ಲಿ ದೆಹಲಿ, ಕೇರಳ, ಮಧ್ಯ ಪ್ರದೇಶ ಹಾಗೂ ಉತ್ತಾರಖಂಡ್ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದಿದೆ. ವರುಣನ ಅಬ್ಬರಕ್ಕೆ ಪ್ರಾಣಹಾನಿ ಸೇರಿದಂತೆ ಸಾಕಷ್ಟು ನಷ್ಟ ಉಂಟಾಗಿದೆ.
1960ರ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯು ನಿರಂತರ 24 ಗಂಟೆಗಳ ಕಾಲ ಮಳೆ ದಾಖಲಿಸಿದೆ. ಭಾರೀ ಮಳೆಯಿಂದಾಗಿ ಉಂಟಾದ ಭೂ ಕುಸಿತದಿಂದ ಉತ್ತರಾಖಂಡ್ನಲ್ಲಿ ಸುಮಾರು 50 ಮಂದಿ ಸಾವಿಗೀಡಾಗಿದ್ದಾರೆ. ಕೇರಳದ ಆಣೆಕಟ್ಟುಗಳಲ್ಲಿ ನೀರು ಅಪಾಯ ಮಟ್ಟ ಮೀರಿದ್ದು ಆತಂಕ ಹೆಚ್ಚಾಗಿದೆ. ಕೇರಳದ ವಿವಿಧ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದೆ.
ಅಕ್ಟೋಬರ್ ತಿಂಗಳು ಅಂತ್ಯವಾಗುತ್ತಾ ಬಂದರೂ ಮಳೆಗಾಲ ನಿಲ್ಲುತ್ತಿಲ್ಲವೇಕೆ..?
ಅಕ್ಟೋಬರ್ ತಿಂಗಳಲ್ಲಿ ಮಳೆಯಾಗೋದು ಸಾಮಾನ್ಯ ವಿಷಯವೇ ಆಗಿದೆ. ನೈಋತ್ಯ ಮಾನ್ಸೂನ್ ದೂರ ಸರಿದು ಈಶಾನ್ಯ ಮಾನ್ಸೂನ್ಗೆ ದಾರಿ ಮಾಡಿಕೊಡುವ ಈ ಅಕ್ಟೋಬರ್ ತಿಂಗಳನ್ನು ಪರಿವರ್ತನೆಯ ತಿಂಗಳು ಎಂದೇ ಕರೆಯಬಹುದು. ಇದು ಭಾರತದಲ್ಲಿ ಪೂರ್ವ ಭಾಗದಲ್ಲಿ ತನ್ನ ಪರಿಣಾಮವನ್ನು ತೋರಿಸುತ್ತದೆ.
ಹೀಗಾಗಿ ಈಗ ಉಂಟಾಗುತ್ತಿರುವ ಮಳೆಗೆ ಮಾನ್ಸೂನ್ ಕಾರಣವಲ್ಲ. ಬದಲಾಗಿ ಬಂಗಾಳಕೊಲ್ಲಿಯಲ್ಲಿ ಉಂಟಾದ ಕಡಿಮೆ ಒತ್ತಡದಿಂದಾಗಿ ವಾಯುವ್ಯ ಭಾರತದ ಹವಾಮಾನದಲ್ಲಿ ವೈಪರೀತ್ಯ ಕಂಡು ಬರುತ್ತದೆ.
ಕಳೆದ ವಾರ ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡ ಉಂಟಾಗಿತ್ತು. ಹೀಗಾಗಿ ತಮಿಳುನಾಡು, ದೆಹಲಿ, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಓಡಿಶಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡ್ನಲ್ಲಿ ತೀವ್ರ ಮಳೆಯನ್ನು ಉಂಟುಮಾಡಿದೆ.