ಕಳೆದ ವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಮಾರಣಾಂತಿಕ ವರೋವಾ ಮಿಟೆ ಪ್ಲೇಗ್ ಬೆಳಕಿಗೆ ಬಂದ ಬಳಿಕ ಇಲ್ಲಿನ ಅಧಿಕಾರಿಗಳು ಬರೋಬ್ಬರಿ ಆರು ಮಿಲಿಯನ್ ಜೇನು ನೊಣಗಳನ್ನು ಕೊಂದು ಹಾಕಿದ್ದಾರೆ.
ವಿಶ್ವಾದ್ಯಂತ ಜೇನು ನೊಣಗಳಿಗೆ ಮಾರಕ ಎನಿಸುವ ಈ ಕಾಯಿಲೆಯು ಜೇನುನೊಣಗಳ ಮೇಲೆ ದಾಳಿ ಮಾಡಿ ಅವುಗಳನ್ನು ತಿನ್ನುತ್ತವೆ. ಅವುಗಳನ್ನು ದುರ್ಬಲಗೊಳಿಸುತ್ತವೆ ಹಾಗೂ ಅವುಗಳ ಹಾರಾಟದ ಮೇಲೆ ಪರಿಣಾಮ ಬೀರುತ್ತವೆ. ಅಲ್ಲದೇ ಜೇನು ನೊಣಗಳ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ.
ಜೇನು ತುಪ್ಪವನ್ನು ಉತ್ಪಾದಿಸುವ ಮುಂಚೂಣಿ ರಾಷ್ಟ್ರಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾವಿದೆ. ವರೋವಾ ಮಿಟೆ ಪ್ಲೇಗ್ ಬೆಳಕಿಗೆ ಬಂದ ಬಳಿಕ ಈ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಸಾವಿರಾರು ಜೇನುನೊಣಗಳನ್ನು ಸಾಯಿಸುವ ನಿರ್ಧಾರಕ್ಕೆ ಆಸ್ಟ್ರೇಲಿಯಾ ಅಧಿಕಾರಿಗಳು ಬಂದಿದ್ದಾರೆ.
ಪ್ರಪಂಚದ ಇತರೆ ಭಾಗಗಳ ಮೇಲೆ ಪರಿಣಾಮ ಬೀರಬಲ್ಲ ಈ ಮಾರಣಾಂತಿಕ ಪ್ಲೇಗ್ನ್ನು ತಡೆಗಟ್ಟುವ ಸಲುವಾಗಿ ಅಧಿಕಾರಿಗಳು ಗಮನಾರ್ಹ ಸಂಖ್ಯೆಯಲ್ಲಿ ಜೇನುನೊಣಗಳ ಮಾರಣಹೋಮವನ್ನು ನಡೆಸಿದ್ದಾರೆ.