ಬೆಂಗಳೂರು: ರಾಜ್ಯದ ಪದವಿ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಈಗಿರುವ ಸೆಮಿಸ್ಟರ್ ಪರೀಕ್ಷೆಯನ್ನು ಅರ್ಧದಷ್ಟು ಕಡಿಮೆ ಮಾಡಲು ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಎರಡು, ನಾಲ್ಕು, ಆರನೇ ಸೆಮಿಸ್ಟರ್ ಗೆ ಮಾತ್ರ ಲಿಖಿತ ಪರೀಕ್ಷೆ ನಡೆಸಿ, ಒಂದು, ಮೂರು, ಐದನೇ ಸೆಮಿಸ್ಟರ್ ಗೆ ಲಿಖಿತ ಪರೀಕ್ಷೆ ಬೇಡ ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳ ತರಗತಿ ಭಾಗವಹಿಸುವಿಕೆ, ವರದಿ ಬರೆಯುವುದು, ಕ್ಷೇತ್ರ ವೀಕ್ಷಣೆ ಸೇರಿ ಇತರ ಚಟುವಟಿಕೆಗಳ ಆಧಾರದಲ್ಲಿ ಮೌಲ್ಯಮಾಪನ ನಡೆಸಿ ಫಲಿತಾಂಶ ನೀಡಬೇಕು ಎಂದು ತಿಳಿಸಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ವಿವಿಗಳಲ್ಲಿ ಏಕರೂಪ ಶುಲ್ಕ ಜಾರಿಗೆ ಉನ್ನತ ಶಿಕ್ಷಣ ಇಲಾಖೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಿರ್ಗಮಿತ ಉಪಾಧ್ಯಕ್ಷ ಪ್ರೊ.ವೈ.ಎಸ್. ಸಿದ್ದೇಗೌಡ ಅಧ್ಯಕ್ಷತೆಯಲ್ಲಿ ರಚಿಸಿದ್ದ ಏಕರೂಪ ಶುಲ್ಕ ತಜ್ಞರ ಸಮಿತಿ ಅಡಿ ರಾಯಚೂರು ವಿವಿ ಕುಲಪತಿ ಡಾ. ಹರೀಶ್ ರಾಮಸ್ವಾಮಿ ಅವರ ಅಧ್ಯಕ್ಷತೆಯ ನಾಲ್ವರು ತಜ್ಞರನ್ನು ಒಳಗೊಂಡ ಎರಡನೆ ಉಪಸಮಿತಿಯು ಹಾಲಿ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಶಿಫಾರಸು ಮಾಡಿ ವರದಿ ನೀಡಿದೆ.