ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ದರಗಳು ಗಗನಕ್ಕೇರಿವೆ. ಇದರಿಂದ ಸಾಮಾನ್ಯ ಜನರಿಗೆ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ. ಈ ದುಬಾರಿ ಟಿಕೆಟ್ ದರವನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಏಕರೂಪದ ಟಿಕೆಟ್ ದರವನ್ನು ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಜೆಡಿಎಸ್‌ನ ಗೋವಿಂದರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ರಾಜ್ಯದಲ್ಲಿ ಟಿಕೆಟ್ ದರಗಳನ್ನು ನಿಗದಿ ಮಾಡುವ ಅಧಿಕಾರ ಚಿತ್ರಮಂದಿರಗಳ ಮಾಲೀಕರಿಗೆ ಇದೆ. ಆದರೆ ಸರ್ಕಾರಕ್ಕೂ ಈ ಅಧಿಕಾರವಿದೆ. ಅಗತ್ಯವಿದ್ದರೆ ಇದನ್ನು ಬಳಸಿಕೊಳ್ಳಲಾಗುವುದು” ಎಂದು ಹೇಳಿದರು.
2018ರ ಬಜೆಟ್‌ನಲ್ಲಿ ಏಕರೂಪದ ಟಿಕೆಟ್ ದರವನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಆದರೆ, ಇದನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ಚಿತ್ರಮಂದಿರಗಳ ಮಾಲೀಕರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದರು. ಈಗ ಮತ್ತೆ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಏಕರೂಪದ ಟಿಕೆಟ್ ದರವನ್ನು ಜಾರಿಗೆ ತರುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಸರ್ಕಾರವು ಪ್ರಯತ್ನಿಸುತ್ತಿದೆ.