
ಏಪ್ರಿಲ್ 1ರ ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಕೆಲವು ನಿಯಮಗಳು ಜಾರಿಗೆ ಬರಲಿವೆ. ಹಾಲು, ಮೊಸರು, ಟೋಲ್ ಶುಲ್ಕ, ವಿದ್ಯುತ್, ಹೊಸ ವಾಹನ ಸೇರಿದಂತೆ ಹಲವು ವಸ್ತುಗಳು ದುಬಾರಿಯಾಗಲಿವೆ.
ಹಾಲು ಮೊಸರಿನ ದರ ಪ್ರತಿ ಲೀಟರ್ ಗೆ 4 ರೂ.ಗಳಷ್ಟು ಹೆಚ್ಚಳವಾಗಲಿದೆ. ನೀಲಿ ಪ್ಯಾಕೆಟ್ ಹಾಲಿನ ತರ 42 ರಿಂದ 46 ರೂ., 500 ಗ್ರಾಂ ಮೊಸರು 26 ರಿಂದ 28 ರೂ.ಗೆ ಏರಿಕೆಯಾಗಲಿದೆ.
ಟೋಲ್ ಶುಲ್ಕ ಶೇಕಡ 3ರಿಂದ 5ರಷ್ಟು ಹೆಚ್ಚಳವಾಗಲಿದೆ. ರಾಜ್ಯದಲ್ಲಿರುವ ಪ್ರಮುಖ ಹೆದ್ದಾರಿಗಳಲ್ಲಿ ಟೋಲ್ ದರ ಶೇಕಡ 5ರಷ್ಟು ಹೆಚ್ಚಳವಾಗಲಿದೆ.
ಏಪ್ರಿಲ್ 1ರಿಂದ ವಿದ್ಯುತ್ ದರ ಪ್ರತಿ ಯೂನಿಟ್ ಗೆ 26 ಪೈಸೆ ಹೆಚ್ಚಳವಾಗಲಿದೆ. ನಿಗದಿತ ಶುಲ್ಕ ಪ್ರತಿ ಕಿಲೋವ್ಯಾಟ್ ಗೆ 25 ರೂಪಾಯಿ ಹೆಚ್ಚಳವಾಗಲಿದೆ. ವಾಣಿಜ್ಯ ಸಂಪರ್ಕದ ನಿಗದಿತ ಶುಲ್ಕ ಪ್ರತಿ ಕಿಲೋ ವ್ಯಾಟ್ ಗೆ 10 ರೂಪಾಯಿ ಹೆಚ್ಚಳವಾಗಲಿದೆ. ಕೈಗಾರಿಕೆ, ವಾಣಿಜ್ಯ ಸಂಪರ್ಕಗಳಿಗೆ ಪ್ರತಿ ಯೂನಿಟ್ ಗೆ 64 ಪೈಸೆಯಿಂದ 1.75 ರೂ. ವರೆಗೆ ಕಡಿತವಾಗಲಿದೆ.
ರಾಜ್ಯದಲ್ಲಿ ಏಪ್ರಿಲ್ 1ರಿಂದ ಖರೀದಿಸುವ 25 ಲಕ್ಷ ರೂ. ಮೀರಿದ ವಿದ್ಯುತ್ ಚಾಲಿತ ಕ್ಯಾಬ್ ಗಳಿಗೆ ಶೇಕಡ 10 ರಷ್ಟು ತೆರಿಗೆ, 10 ಲಕ್ಷ ರೂಪಾಯಿವರೆಗಿನ ಕ್ಯಾಬ್ ಗಳಿಗೆ ಶೇಕಡ 5ರಷ್ಟು ತೆರಿಗೆ, ಉಳಿದಂತೆ ಮಾರುತಿ, ಟಾಟಾ, ಹುಂಡೈ, ಮಹೀಂದ್ರ ಸೇರಿ ವಿವಿಧ ಕಾರ್ ಗಳು ಶೇ. 4ರಷ್ಟು ಏರಿಕೆಯಾಗಲಿದೆ.