
ಹೊಸ ಆದಾಯ ತೆರಿಗೆ ನೀತಿ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ವಾರ್ಷಿಕ 12 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಲಭಿಸಲಿದೆ. 75,000 ದಿಂದ ಸ್ಟಾಂಡರ್ಡ್ ಡಿಡಕ್ಷನ್ ಸೇರಿ 12.75 ಲಕ್ಷದವರೆಗೂ ವಿನಾಯಿತಿ ಲಭ್ಯವಿರುತ್ತದೆ.
ಏಕೀಕೃತ ಪಿಂಚಣಿ ಯೋಜನೆ(ಯುಪಿಎಸ್) ಇಂದಿನಿಂದ ಜಾರಿಗೆ ಬರಲಿದ್ದು, ಕನಿಷ್ಠ 25 ವರ್ಷ ಸೇವೆ ಸಲ್ಲಿಸಿರುವ ಕೇಂದ್ರ ಸರ್ಕಾರಿ ನೌಕರರು ನಿವೃತ್ತಿಯ ಬಳಿಕ ಕೊನೆಯ 12 ತಿಂಗಳ ಸಂಬಳದ ಸರಾಸರಿಯ ಶೇ. 50ರಷ್ಟನ್ನು ಪಿಂಚಣಿ ರೂಪದಲ್ಲಿ ಪಡೆಯಲಿದ್ದಾರೆ.
ಗೂಗಲ್ ಪೇ, ಫೋನ್ ಪೇ ಬಳಸುವವರಿಗೆ ಎಚ್ಚರಿಕೆಯ ಸುದ್ದಿ ಇಲ್ಲಿದೆ. ಯುಪಿಐ ಖಾತೆಗೆ ಮೊಬೈಲ್ ಸಂಖ್ಯೆ ಜೋಡಣೆ ಆಗಿದ್ದರೂ, ಆ ಮೊಬೈಲ್ ಸಂಖ್ಯೆಯನ್ನು ದೀರ್ಘ ಸಮಯದ ಬಳಸದೆ ಇದ್ದಲ್ಲಿ ಬ್ಯಾಂಕುಗಳು ಕ್ರಮ ಕೈಗೊಳ್ಳಲಿದ್ದು, ಸಂಬಂಧಿತ ಬ್ಯಾಂಕ್ ನಿಂದ ಆ ಮೊಬೈಲ್ ಸಂಖ್ಯೆಯು ಯುಪಿಐ ಖಾತೆ ನಿಷ್ಕ್ರಿಯವಾಗಲಿದೆ.
ಇದಲ್ಲದೇ ಏ. 1ರಿಂದ ಹಲವು ವಿಭಾಗಗಳಲ್ಲಿ ಟಿಡಿಎಸ್ ಮಿತಿ ಏರಿಕೆ ಮಾಡಲಾಗಿದೆ. ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗೆ ಇಟ್ಟಿರುವ ಸಣ್ಣ ತೆರಿಗೆದಾರರಿಗೆ ಟಿಡಿಎಸ್ ಮಿತಿ ಏರಿಕೆಯಿಂದ ರಿಲೀಫ್ ಸಿಕ್ಕಿದೆ. ಹಿರಿಯ ನಾಗರಿಕರಿಗೆ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಮಿತಿಯನ್ನು ಒಂದು ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.
ಹಾಲು, ವಿದ್ಯುತ್, ಟೋಲ್ ದುಬಾರಿ
ಏಪ್ರಿಲ್ 1ರ ಇಂದಿನಿಂದ ಹಾಲು, ಮೊಸರು, ಟೋಲ್ ಶುಲ್ಕ, ವಿದ್ಯುತ್, ಹೊಸ ವಾಹನ ಸೇರಿದಂತೆ ಹಲವು ವಸ್ತುಗಳು ದುಬಾರಿಯಾಗಲಿವೆ. ಹಾಲು ಮೊಸರಿನ ದರ ಪ್ರತಿ ಲೀಟರ್ ಗೆ 4 ರೂ.ಗಳಷ್ಟು ಹೆಚ್ಚಳವಾಗಲಿದೆ. ನೀಲಿ ಪ್ಯಾಕೆಟ್ ಹಾಲಿನ ತರ 42 ರಿಂದ 46 ರೂ., 500 ಗ್ರಾಂ ಮೊಸರು 26 ರಿಂದ 28 ರೂ.ಗೆ ಏರಿಕೆಯಾಗಲಿದೆ.
ಟೋಲ್ ಶುಲ್ಕ ಶೇಕಡ 3ರಿಂದ 5ರಷ್ಟು ಹೆಚ್ಚಳವಾಗಲಿದೆ. ರಾಜ್ಯದಲ್ಲಿರುವ ಪ್ರಮುಖ ಹೆದ್ದಾರಿಗಳಲ್ಲಿ ಟೋಲ್ ದರ ಶೇಕಡ 5ರಷ್ಟು ಹೆಚ್ಚಳವಾಗಲಿದೆ.
ಏಪ್ರಿಲ್ 1ರಿಂದ ವಿದ್ಯುತ್ ದರ ಪ್ರತಿ ಯೂನಿಟ್ ಗೆ 26 ಪೈಸೆ ಹೆಚ್ಚಳವಾಗಲಿದೆ. ನಿಗದಿತ ಶುಲ್ಕ ಪ್ರತಿ ಕಿಲೋವ್ಯಾಟ್ ಗೆ 25 ರೂಪಾಯಿ ಹೆಚ್ಚಳವಾಗಲಿದೆ. ವಾಣಿಜ್ಯ ಸಂಪರ್ಕದ ನಿಗದಿತ ಶುಲ್ಕ ಪ್ರತಿ ಕಿಲೋ ವ್ಯಾಟ್ ಗೆ 10 ರೂಪಾಯಿ ಹೆಚ್ಚಳವಾಗಲಿದೆ. ಕೈಗಾರಿಕೆ, ವಾಣಿಜ್ಯ ಸಂಪರ್ಕಗಳಿಗೆ ಪ್ರತಿ ಯೂನಿಟ್ ಗೆ 64 ಪೈಸೆಯಿಂದ 1.75 ರೂ. ವರೆಗೆ ಕಡಿತವಾಗಲಿದೆ.
ರಾಜ್ಯದಲ್ಲಿ ಏಪ್ರಿಲ್ 1ರಿಂದ ಖರೀದಿಸುವ 25 ಲಕ್ಷ ರೂ. ಮೀರಿದ ವಿದ್ಯುತ್ ಚಾಲಿತ ಕ್ಯಾಬ್ ಗಳಿಗೆ ಶೇಕಡ 10 ರಷ್ಟು ತೆರಿಗೆ, 10 ಲಕ್ಷ ರೂಪಾಯಿವರೆಗಿನ ಕ್ಯಾಬ್ ಗಳಿಗೆ ಶೇಕಡ 5ರಷ್ಟು ತೆರಿಗೆ, ಉಳಿದಂತೆ ಮಾರುತಿ, ಟಾಟಾ, ಹುಂಡೈ, ಮಹೀಂದ್ರ ಸೇರಿ ವಿವಿಧ ಕಾರ್ ಗಳು ಶೇ. 4ರಷ್ಟು ಏರಿಕೆಯಾಗಲಿದೆ.
ಬೆಂಗಳೂರಲ್ಲಿ ಆಸ್ತಿ ತೆರಿಗೆ ಜತೆಗೆ ಕಸ ಸಂಗ್ರಹಣೆ, ವಿಲೇವಾರಿ ಶುಲ್ಕವನ್ನೂ ವಸೂಲಿ ಮಾಡಲಾಗುವುದು.