ಜಾರ್ಖಂಡ್ನಲ್ಲಿ ಆನೆಯೊಂದು ಕಳೆದ 2 ತಿಂಗಳಲ್ಲಿ ಬರೋಬ್ಬರಿ 16 ಮಂದಿ ಗ್ರಾಮಸ್ಥರನ್ನ ಹತ್ಯೆಗೈದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಮಾರು 15 ರಿಂದ 16 ವರ್ಷ ಪ್ರಾಯದ್ದು ಎಂದು ಅಂದಾಜಿಸಲಾದ ವಯಸ್ಕ ಆನೆಯೊಂದು ತನ್ನ ಗುಂಪಿನಿಂದ ದೂರಾಗಿ ಬುಡಕಟ್ಟು ಸಂತಲ್ ಪರ್ಗಾನಾ ಪ್ರದೇಶದಲ್ಲಿ ನೆಲೆಸಿದೆ. ಬಹುಶಃ ಈ ಆನೆಯು ಆಕ್ರೋಶದ ಬುದ್ಧಿಯನ್ನ ನೋಡುತ್ತಿದ್ದರೆ ಅದು ಲೈಂಗಿಕ ಕ್ರಿಯೆಗೆ ಉತ್ಸುಕವಾಗಿರಬಹುದು. ಉಳಿದ ಪುರುಷ ಆನೆಗಳಿಂದ ಲೈಂಗಿಕ ಪೈಪೋಟಿಯಿಂದಾಗಿ ಗುಂಪಿನಿಂದ ಹೊರಬಿದ್ದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
20 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ತಂಡ ಆನೆಯನ್ನ ಸೆರೆ ಹಿಡಿಯುವ ಪ್ರಯತ್ನದಲ್ಲಿದೆ. ಮಾತ್ರವಲ್ಲದೇ ಆನೆ ಯಾಕೆ ಈ ರೀತಿ ಮಾಡ್ತಿದೆ ಅನ್ನೋದಕ್ಕೆ ನಿಖರ ಕಾರಣ ಹುಡುಕಲು ಪ್ರಯತ್ನ ಪಡುತ್ತಿದ್ದೇವೆ ಎಂದೂ ಹೇಳಿದ್ದಾರೆ.
ಇದೇ ಮಂಗಳವಾರ ವೃದ್ಧ ದಂಪತಿಯನ್ನ ಸೊಂಡಿಲಿನಿಂದ ಎತ್ತಿ ಆನೆ ಅವರನ್ನ ಹತ್ಯೆ ಮಾಡಿತ್ತು. ಈ ಬಗ್ಗೆಯೂ ಸ್ಪಷ್ಟನೆ ನೀಡಿದ ಅರಣ್ಯ ಇಲಾಖೆ ಅಧಿಕಾರಿ ರೈ, ಬಹುಶಃ ಅವರು ಆನೆಗೆ ತುಂಬಾ ಸಮೀಪದಲ್ಲಿ ಇದ್ದಿರಬಹುದು ಎಂದು ಅಂದಾಜಿಸಿದ್ದಾರೆ.