ಬೆಳಗಾವಿ: ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಭೂ ಕಂದಾಯ(ಮೂರನೇ ತಿದ್ದುಪಡಿ) ವಿಧೇಯಕ ಅಂಗೀಕಾರವಾಗಿದೆ.
ಕೈಗಾರಿಕೆಗಳನ್ನು ಸ್ಥಾಪಿಸಲು ಎರಡು ಎಕರೆವರೆಗಿನ ಕೃಷಿ ಜಮೀನುಗಳಿಗೆ ಭೂ ಪರಿವರ್ತನೆಯಿಂದ ವಿನಾಯಿತಿಗೆ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಭೂ ವ್ಯಾಜ್ಯ ಪ್ರಕರಣಗಳ ಆದೇಶಗಳಲ್ಲಿ ಮೇಲ್ಮನವಿ ಹೋಗಲು ಕರ್ನಾಟಕ ಭೂ ಕಂದಾಯ ಅಪೀಲು ನ್ಯಾಯಾಧಿಕರಣ ರಚನೆಗೆ ಅವಕಾಶ ಕಲ್ಪಿಸಲಾಗಿದೆ.
ಕೈಗಾರಿಕಾ ವಲಯ ಎಂದು ವರ್ಗೀಕರಣ ಮಾಡಿರುವ ಪ್ರದೇಶದಲ್ಲಿ ಎರಡು ಎಕರೆವರೆಗಿನ ಜಮೀನನ್ನು ಭೂ ಪರಿವರ್ತನೆ ಮಾಡಲು ಕೈಗಾರಿಕಾ ಉದ್ದೇಶಕ್ಕೆ ಬಳಕೆ ಮಾಡಲು ಅವಕಾಶ ಮಾಡಿಕೊಡುವ 2024ನೇ ಸಾಲಿನ ಭೂ ಕಂದಾಯ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದೆ.
ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ 1961ರ ಮೇರೆಗೆ ಸ್ಥಳೀಯ ಯೋಜನಾ ಪ್ರಾಧಿಕಾರಗಳ ಮೂಲಕ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಇದರಲ್ಲಿ ಕೈಗಾರಿಕಾ ವಲಯವಾಗಿ ಗುರುತಿಸಿದ ಜಮೀನಿನಲ್ಲಿ ಎರಡು ಎಕರೆವರೆಗೆ ಭೂ ಪರಿವರ್ತನೆ ಮಾಡದೇ ಕೈಗಾರಿಕೆಗೆ ಬಳಸಿಕೊಳ್ಳಬಹುದಾಗಿದೆ ಎಂದು ತಿದ್ದುಪಡಿ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಬಗ್ಗೆ ಮಾಹಿತಿ ನೀಡಿದ್ದು, ಕೈಗಾರಿಕೆ ವಲಯ ಎಂದು ನಿಗದಿಯಾದ ಜಾಗದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಎರಡು ಎಕರೆ ವರೆಗಿನ ಭೂಮಿಗೆ ಭೂ ಪರಿವರ್ತನೆ ಮಾಡಬೇಕಿಲ್ಲ. ಹಳದಿ, ಹಸಿರು ವಲಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೂ ಇದು ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಇದೇ ಕಾಯ್ದೆಯ ಸೆಕ್ಷನ್ 67, 104 ಮತ್ತು 136 ಅನ್ನು ಕೂಡ ತಿದ್ದುಪಡಿ ಮಾಡಲಾಗಿದ್ದು, ಸರ್ಕಾರಿ ಜಾಗ ಒತ್ತುವರಿ ಮಾಡಿದ್ದರೆ ತೆರವುಗೊಳಿಸುವ ಅಧಿಕಾರವನ್ನು ತಹಶೀಲ್ದಾರ್ ಅವರಿಗೆ ನೀಡಲಾಗಿದೆ.