ನವದೆಹಲಿ: ಪ್ರಧಾನಿ ರಸ್ತೆ ಮಾರ್ಗವಾಗಿ ಬರುತ್ತಿದ್ದಾರೆಂದು ಪೊಲೀಸರು ನಮಗೆ ಹೇಳಿದರು. ಅವರು ಸುಳ್ಳು ಹೇಳುತ್ತಿದ್ದಾರೆಂದು ನಾವು ಭಾವಿಸಿದ್ದೆವು ಎಂದು ಪ್ರಧಾನಿ ಮೋದಿ ಬೆಂಗಾವಲು ಪಡೆಯನ್ನು ಪ್ರತಿಭಟನಾಕಾರರು ಏಕೆ ತಡೆದರು ಎಂಬುದಕ್ಕೆ ರೈತ ಮುಖಂಡ ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯನ್ನು ತನ್ನ ಕಾರ್ಯಕರ್ತರು ತಡೆದಿರುವುದನ್ನು ಭಾರತೀಯ ಕಿಸಾನ್ ಯೂನಿಯನ್(ಕ್ರಾಂತಿಕಾರಿ) ಒಪ್ಪಿಕೊಂಡಿದೆ.
ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖ್ಯಸ್ಥ ಸುರ್ಜಿತ್ ಸಿಂಗ್ ಫೂಲ್, ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಕುರಿತು ಸರ್ಕಾರ ಯಾವುದೇ ಸಮಿತಿ ರಚಿಸದ ಕಾರಣ 12-13 ರೈತ ಸಂಘಟನೆಗಳು ಪ್ರತಿಭಟಿಸಲು ನಿರ್ಧರಿಸಿದ್ದವು ಎಂದು ಹೇಳಿದರು. ಆದಾಗ್ಯೂ, ಪಿಎಂ ಮೋದಿ ರ್ಯಾಲಿ ನಡೆಸಲು ಉದ್ದೇಶಿಸಿರುವ ಸ್ಥಳದಿಂದ ಎಂಟು ಕಿ.ಮೀ ದೂರದಲ್ಲಿ ಗುಂಪು ಪ್ರತಿಭಟಿಸುತ್ತಿತ್ತು. ಇದು ಕೊನೆಯ ಕ್ಷಣದಲ್ಲಿ ಪ್ರಧಾನಿಯವರ ಮಾರ್ಗವನ್ನು ಬದಲಾಯಿಸಿದ್ದು ದುರಂತಕ್ಕೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಪಂಜಾಬ್ 12 -13 ಸಂಘಟನೆಗಳು ಪ್ರತಿಭಟನೆಗೆ ನಿರ್ಧರಿಸಿದ್ದವು. ಸರ್ಕಾರದ ಭರವಸೆಯ ಹೊರತಾಗಿಯೂ ಎಂಎಸ್ಪಿ ಕುರಿತು ಯಾವುದೇ ಸಮಿತಿಯನ್ನು ರಚಿಸದಿರುವುದು. ಮೂರು ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರಿಗೆ ಯಾವುದೇ ಪರಿಹಾರ ನೀಡದಿರುವುದು. ಲಖೀಂಪುರ ಖೇರಿ ಪ್ರಕರಣದಲ್ಲಿ ಪ್ರಮುಖ ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಪ್ರತಿಭಟನೆ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 2 ಗಂಟೆಗೆ, ಪ್ರಧಾನಿ ಬಟಿಂಡಾದಿಂದ ರಸ್ತೆ ಮಾರ್ಗವಾಗಿ ಬರುತ್ತಾರೆ ಎಂದು ನಮಗೆ ತಿಳಿಯಿತು. ರ್ಯಾಲಿಯ ಬಳಿ ದೊಡ್ಡ ಹೆಲಿಪ್ಯಾಡ್ ಇತ್ತು. ಅವರು ರಸ್ತೆಯ ಮೂಲಕ ಬರುತ್ತಿದ್ದಾರೆ ಎಂದು ಪೊಲೀಸರು ಹೇಳಿದರು. ಹಾಗಾಗಿ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ನಾವು ಭಾವಿಸಿದ್ದೇವು. ಪ್ರಧಾನಿ ವಿಮಾನ, ಹೆಲಿಕಾಫ್ಟರ್ ನಲ್ಲಿ ಬರುತ್ತಾರೆ. ಹಾಗಾಗಿ ನಾವು ರಸ್ತೆ ತೆರವುಗೊಳಿಸಲಿಲ್ಲ. ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ನಾವು ಪೊಲೀಸರಿಗೆ ಹೇಳಿದೆವು ಎಂದು ಸುರ್ಜಿತ್ ಸಿಂಗ್ ಫೂಲ್ ಹೇಳಿದ್ದಾರೆ.
‘ಪ್ರಧಾನಿ ರಸ್ತೆಯಲ್ಲಿ ಬರುತ್ತಾರೆ ಎಂದು ಮನವರಿಕೆ ಮಾಡಿಕೊಟ್ಟರೆ ರಸ್ತೆ ಖಾಲಿ ಮಾಡುತ್ತಿದ್ದೆವು’
ಪೊಲೀಸರು ಪ್ರತಿಭಟನಾ ನಿರತ ರೈತರನ್ನು ತಡೆಯಲು ಪ್ರಯತ್ನಿಸಿದರು, ಆದರೆ ಪೊಲೀಸರು ಮತ್ತು ರೈತರ ಸಂಖ್ಯೆ ಸಮಾನವಾಗಿತ್ತು. ನಾವು ರಸ್ತೆಯನ್ನು ತೆರವುಗೊಳಿಸಲಿಲ್ಲ. ಅವರ ಕಾರ್ಯಕ್ರಮ ಹೇಗೆ ಬದಲಾಯಿಸಲಾಯಿತು ಎಂಬುದು ನಮಗೆ ತಿಳಿದಿಲ್ಲ. ಅವರು ರಸ್ತೆ ಮೂಲಕ ಬರುತ್ತಿದ್ದಾರೆ ಎಂದು ನಮಗೆ ಮನವರಿಕೆ ಮಾಡಿದ್ದರೆ ನಾವು ರಸ್ತೆಯನ್ನು ಖಾಲಿ ಮಾಡುತ್ತಿದ್ದೆವು.ಗೊಂದಲ ಉಂಟಾಗಿದ್ದರಿಂದ ಹೀಗಾಗಿದೆ ಎಂದು ಅವರು ಹೇಳಿದ್ದಾರೆ.
ಭದ್ರತಾ ಲೋಪಕ್ಕೆ ಕಾರಣವಾದ ಘಟನೆಗೆ BKU ಕ್ರಾಂತಿಕಾರಿ ಸದಸ್ಯರು ಕ್ಷಮೆಯಾಚಿಸುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಫೂಲ್, ಪ್ರತಿಭಟನೆ ಮಾಡುವುದು ಅವರ ‘ಪ್ರಜಾಪ್ರಭುತ್ವದ ಹಕ್ಕು’ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.