
ನವದೆಹಲಿ: ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ವೈವಾಹಿಕ ಅತ್ಯಾಚಾರದ ವಿಷಯ ಕಾನೂನು ಸಮಸ್ಯೆಗಿಂತ ಹೆಚ್ಚು ಸಾಮಾಜಿಕ ಸಮಸ್ಯೆಯಾಗಿದ್ದು, ಇದನ್ನು ಅಪರಾಧೀಕರಣ ಮಾಡಿದಲ್ಲಿ ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟಪಡಿಸಿದೆ.
ವೈವಾಹಿಕ ಅತ್ಯಾಚಾರ ಅಪರಾಧವೇ ಎಂದು ಸುಪ್ರೀಂ ಕೋರ್ಟ್ ನಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದಿಂದ ಅಫಿಡವಿಟ್ ಮೂಲಕ ಅಭಿಪ್ರಾಯ ಸಲ್ಲಿಸಲಾಗಿದೆ. ಪತ್ನಿಯ ಸಮ್ಮತಿ ಪಡೆದೇ ಪತಿ ಸಂಬಂಧ ಬೆಳೆಸಬೇಕು ನಿಜ. ಇದನ್ನು ಉಲ್ಲಂಘಿಸುವ ಮೂಲಭೂತ ಹಕ್ಕು ಆತನಿಗೆ ಇಲ್ಲ. ಆದರೂ, ಒಂದು ವೇಳೆ ಪತಿಯು ಪತ್ನಿಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯನ್ನು ಅಪರಾಧ ವ್ಯಾಪ್ತಿಗೆ ತಂದರೆ ವೈವಾಹಿಕ ಜೀವನದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದು ಕೋರ್ಟ್ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲ. ಎಲ್ಲಾ ಪಾಲುದಾರರೊಂದಿಗೆ ರಾಜ್ಯಗಳ ಜೊತೆ ಸರಿಯಾದ ಸಮಾಲೋಚನೆ ನಡೆಸದೆ ವೈವಾಹಿಕ ಅತ್ಯಾಚಾರದ ಬಗ್ಗೆ ನಿರ್ಧರಿಸಲು ಆಗದು ಎಂದು ಸ್ಪಷ್ಟಪಡಿಸಲಾಗಿದೆ.
ಪುರುಷನು ತನ್ನ ಸ್ವಂತ ಹೆಂಡತಿಯೊಂದಿಗಿನ ಲೈಂಗಿಕ ಕ್ರಿಯೆಯನ್ನು “ಅತ್ಯಾಚಾರ” ಎಂದು ಶಿಕ್ಷಾರ್ಹಗೊಳಿಸಿದರೆ, ಅದು ದಾಂಪತ್ಯ ಸಂಬಂಧದ ಮೇಲೆ ತೀವ್ರ ಪರಿಣಾಮ ಬೀರಬಹುದು ಮತ್ತು ಮದುವೆಯ ಸಂಬಂಧದಲ್ಲಿ ಗಂಭೀರ ಅಡಚಣೆಗಳಿಗೆ ಕಾರಣವಾಗಬಹುದು ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.