ಒಣ ಹಣ್ಣುಗಳ ಸೇವನೆಯಿಂದಾಗುವ ಒಳ್ಳೆಯ ಸಂಗತಿಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಅದು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸಿ ರಕ್ತ ಹೀನತೆಯಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ಆದರೆ ಅತಿಯಾದ ಒಣಹಣ್ಣುಗಳ ಸೇವನೆ ಸಮಸ್ಯೆಗಳನ್ನು ತಂದೊಡ್ಡೀತು ಎಂಬುದು ನಿಮಗೆ ತಿಳಿದಿದೆಯೇ?
ಕರ್ಜೂರ ಅಥವಾ ಬಾದಾಮಿಯನ್ನು ಹೆಚ್ಚು ಸೇವಿಸುವುದರಿಂದ ಉಷ್ಣ ಸಂಬಂಧಿ ಸಮಸ್ಯೆಗಳು ಕಂಡುಬಂದಾವು. ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳಬಹುದು. ಚಳಿಗಾಲದಲ್ಲಿ ತ್ವಚೆ ಬಿರುಕು ಬಿಡಲು ಇದೂ ಕಾರಣವಾಗಬಹುದು.
ಖರ್ಜೂರ ಹೆಚ್ಚು ತಿಂದರೆ ಬಾಯಿಹುಣ್ಣು ಕಾಣಿಸಿಕೊಳ್ಳುತ್ತದೆ. ಸಕ್ಕರೆ ಕಾಯಿಲೆ ಇರುವವರು ದಿನಕ್ಕೊಂದು ಖರ್ಜೂರ ತಿಂದರೆ ಸಾಕು. ಅದರಲ್ಲೂ ತೂಕ ಇಳಿಸುವ ಯೋಜನೆ ಹಾಕಿಕೊಂಡವರು ಕಡ್ಡಾಯವಾಗಿ ಒಣಹಣ್ಣುಗಳಿಂದ ದೂರವಿರಬೇಕು.
ಉಪ್ಪು ಹಾಕಿ ಸಂಸ್ಕರಿಸಿಟ್ಟ ಒಣ ಹಣ್ಣುಗಳ ಸೇವನೆಯಿಂದ ರಕ್ತದೊತ್ತಡ ಹೆಚ್ಚಬಹುದು. ಜೀರ್ಣ ಸಂಬಂಧಿ ಸಮಸ್ಯೆಗಳು ಕಂಡುಬಂದಾವು. ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆಯುಬ್ಬರಿಸಿ, ಹುಳಿತೇಗಿನ ಸಮಸ್ಯೆಯೂ ಕಂಡುಬಂದೀತು. ಹಾಗಾಗಿ ಒಳ್ಳೆಯದು ಎಂಬ ಕಾರಣಕ್ಕೆ ಯಾವುದೇ ಒಣಹಣ್ಣುಗಳನ್ನು 4-6 ಕ್ಕಿಂತ ಹೆಚ್ಚು ಸೇವಿಸದಿರಿ.