ಕೋಪ ಅತ್ಯಂತ ಸಹಜವಾದ ಭಾವನೆಗಳಲ್ಲೊಂದು. ಆದರೆ ಪದೇ ಪದೇ ಕೋಪ ಬರುವುದು, ಅದನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವುದು ಸಹಜವಲ್ಲ. ತುಂಬಾ ಆಕ್ರಮಣಕಾರಿ ರೀತಿಯಲ್ಲಿ ಪ್ರತಿಕ್ರಿಯಿಸುವಿಕೆ ಸ್ವಯಂ-ವಿನಾಶಕ್ಕೆ ಕಾರಣವಾಗಬಹುದು. ಏಕೆಂದರೆ ವಿಪರೀತವಾದ ಸಿಟ್ಟು ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಕೋಪ ಹೃದಯಕ್ಕೆ ಒಳ್ಳೆಯದಲ್ಲ
ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕೋಪ ಹೃದಯಕ್ಕೆ ಒಳ್ಳೆಯದಲ್ಲ. ಎಂಡೋಥೀಲಿಯಂ-ಅವಲಂಬಿತ ವಾಸೋಡೈಲೇಷನ್ ಮೇಲೆ ಯಾವುದೇ ಸಂಖ್ಯಾಶಾಸ್ತ್ರೀಯವಾಗಿ ಗಮನಾರ್ಹವಾದ ನಕಾರಾತ್ಮಕ ಪರಿಣಾಮಗಳನ್ನು ಇದು ಬೀರುತ್ತದೆ ಎಂಬ ಬಗ್ಗೆ ಸಂಶೋಧನೆ ಮಾಡಲಾಗಿದೆ. ಇದು ರಕ್ತದ ಹರಿವನ್ನು ನಿಯಂತ್ರಿಸುವ ಮತ್ತು ಹೃದಯರಕ್ತನಾಳದ ಹೋಮಿಯೋಸ್ಟಾಸಿಸ್ ಅನ್ನು ನಿರ್ವಹಿಸುವ ಪ್ರಮುಖ ಕಾರ್ಯವಿಧಾನವಾಗಿದೆ.
ಹಾನಿ ಹೇಗೆ ಸಂಭವಿಸುತ್ತದೆ?
ನಮ್ಮೊಳಗಿನ ಕೋಪವು ದೇಹಕ್ಕೆ ಹಾನಿ ಮಾಡುವ ಹಾರ್ಮೋನ್‌ಗಳನ್ನು ಪ್ರಚೋದಿಸುತ್ತದೆ. ಇದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ, ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯಕ್ಕೆ ಹೋಗುವ ರಕ್ತನಾಳಗಳ ಒಳ ಪದರವನ್ನು ಹಾನಿಗೊಳಿಸುತ್ತದೆ. ಪರಿಣಾಮ ಹಾನಿಗೊಳಗಾದ ರಕ್ತನಾಳದ ಮೇಲೆ ಪ್ಲೇಟ್ಲೆಟ್ ಮತ್ತು ಲಿಪಿಡ್ ಶೇಖರಣೆಗೆ ಕಾರಣವಾಗುತ್ತದೆ, ಇದು ಅಂತಿಮವಾಗಿ ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಕೋಪವು ಹೃದಯದ ಆರೋಗ್ಯವನ್ನು ಹಾನಿಗೊಳಿಸುವುದಲ್ಲದೆ, ಕಿರಿಕಿರಿ, ಆಯಾಸ, ಭಾವನಾತ್ಮಕ ಸಮಸ್ಯೆ, ನಿದ್ರೆಯ ತೊಂದರೆಗಳು, ಖಿನ್ನತೆ, ಒತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಅನೇಕರು ಇದರಿಂದಾಗಿಯೇ ಮದ್ಯ, ಸಿಗರೇಟ್ ಮತ್ತಿತರ ಮಾದಕ ವ್ಯಸನಕ್ಕೆ ದಾಸರಾಗುತ್ತಾರೆ. ಕೋಪವನ್ನು ನಿಯಂತ್ರಿಸದಿದ್ದರೆ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಹಾನಿ ಖಚಿತ.
ಕೋಪವನ್ನು ನಿಯಂತ್ರಿಸುವುದು ಹೇಗೆ?
ಕೋಪವನ್ನು ನಿಯಂತ್ರಿಸಲು ಕೆಲವು ಸರಳವಾದ ಕ್ರಮಗಳನ್ನು ಅನುಸರಿಸಬೇಕು. ವಿಪರೀತ ಕೋಪ ಬಂದಾಗ ಉಸಿರಾಟದ ವ್ಯಾಯಾಮ ಮಾಡಿ. ಯೋಗ ಮತ್ತು ಧ್ಯಾನದ ಸಹಾಯವನ್ನು ತೆಗೆದುಕೊಳ್ಳಿ. ಸ್ಲೀಪ್ ಸೈಕಲ್ ಸರಿಯಾಗಿರುವಂತೆ ನೋಡಿಕೊಳ್ಳಿ. ನೀವು ಸೇವಿಸುವ ಆಹಾರ ಆರೋಗ್ಯಕರವಾಗಿರಲಿ. ಸ್ನೇಹಿತರು ಮತ್ತು ಕುಟುಂಬಸ್ಥರ ನೆರವು ಪಡೆಯಬಹುದು. ಅಗತ್ಯವಿದ್ದರೆ ತಜ್ಞರಿಂದ ಸಲಹೆ ಪಡೆಯಿರಿ.