ಬೆಂಗಳೂರು: ಅತ್ಯಾಚಾರಕ್ಕೆ ಒಳಗದ ಸಂತ್ರಸ್ತೆಯರನ್ನು ಆಸ್ಪತ್ರೆಗಳಲ್ಲಿ ಮಹಿಳಾ ವೈದ್ಯರಿಂದಲೇ ಪರೀಕ್ಷೆಗೆ ಒಳಪಡಿಸುವ ಕುರಿತಂತೆ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 184ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ಖಾಸಗಿ ಹಕ್ಕಿನ ರಕ್ಷಣೆಗಾಗಿ ಮಹಿಳಾ ವೈದ್ಯರಿಂದಲೇ ವೈದ್ಯಕೀಯ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ(ಬಿಎನ್ಎಸ್)ಗೆ ಸೂಕ್ತ ತಿದ್ದುಪಡಿ ತರಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಲಾಗಿದೆ.
ಬೆಂಗಳೂರಿನಲ್ಲಿ 23 ವರ್ಷದ ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಯತ್ನ ಆರೋಪ ಎದುರಿಸುತ್ತಿರುವ ಒಡಿಶಾದ 19 ವರ್ಷದ ಯುವಕ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ನ್ಯಾಯಪೀಠ ಈ ಸೂಚನೆ ನೀಡಿದೆ. ಅಪರಾಧ ಪ್ರಕ್ರಿಯ ಸಂಹಿತೆ ಸಿಆರ್ಪಿಸಿ ಸೆಕ್ಷನ್ 114 ಎ ಅಡಿಯಲ್ಲಿ ಯಾವುದೇ ಪುರುಷ, ಮಹಿಳಾ ನೋಂದಾಯಿತ ವೈದ್ಯರು ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಪರೀಕ್ಷಿಸಬಹುದಾಗಿತ್ತು. ಅದೇ ನಿಯಮವನ್ನು ಬಿಎನ್ಎಸ್ 184 ಅಡಿಯಲ್ಲಿ ಯಥಾವತ್ತಾಗಿ ಉಲ್ಲೇಖಿಸಲಾಗಿದೆ. ಆದರೆ, ಇದರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರಿಗೆ ಅನ್ಯಾಯ ಮುಜುಗರ ಆಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ಖಾಸಗಿತನದ ಹಕ್ಕಿನ ರಕ್ಷಣೆಗಾಗಿ ಮಹಿಳಾ ವೈದ್ಯರಿಂದಲೇ ವೈದ್ಯಕೀಯ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಗೆ ಸೂಕ್ತ ತಿದ್ದುಪಡಿ ತರಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.