ಬೆಂಗಳೂರು: ಜನವರಿ 16ರಂದು ಮಧ್ಯಾಹ್ನ ನಿಗದಿಯಾಗಿದ್ದ ಪದವಿ ಶಿಕ್ಷಣದ ಎಲ್ಲಾ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯ ದಿಢೀರ್ ಮುಂದೂಡಿದೆ.
ಬಿಕಾಂ ಜೊತೆ ಸಿಎ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇದೇ ಗುರುವಾರ ಇದೇ ಸಮಯಕ್ಕೆ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದರು. ಹೀಗಾಗಿ ಬೆಳಗಿನ ಪರೀಕ್ಷೆಗಳನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು.
ಮತ್ತೆ ಗೊಂದಲ ಉಂಟಾಗಿದ್ದರಿಂದ ಮಧ್ಯಾಹ್ನ ಮುಂದೂಡಿಕೆಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮತ್ತೆ ಮುಂದೂಡಲಾಗಿದೆ. ಶೀಘ್ರದಲ್ಲಿಯೇ ಪರೀಕ್ಷೆಯ ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದು ಬೆಂಗಳೂರು ನಗರ ವಿವಿ ತಿಳಿಸಿದೆ.