ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಶುಕ್ರವಾರ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆಯವರನ್ನು ಭೇಟಿ ಮಾಡಿದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ.
ಕೆಪಿಟಿಸಿಎಲ್ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ 433 ಕಿರಿಯ ಸ್ಟೇಷನ್ ಪರಿಚಾರಕ, 2542 ಕಿರಿಯ ಪವರ್ ಮ್ಯಾನ್ ಹುದ್ದೆಗಳು ಸೇರಿ ಒಟ್ಟು 2975 ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು ಎಂದು ಕೋರಲಾಗಿದೆ.
ನೇಮಕಾತಿಗೆ ಹೊರಡಿಸಿದ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಜೇಷ್ಠತೆ ಆಧಾರದಲ್ಲಿ 1:5 ಅನುಪಾತದಲ್ಲಿ ಸಹನ ಶಕ್ತಿ ಪರೀಕ್ಷೆಗೆ ಕರೆಯಲಾಗುತ್ತದೆ. ಸಹನ ಶಕ್ತಿ ಪರೀಕ್ಷೆಯಲ್ಲಿ ಪಾಸಾದರೆ ಅಂಕಗಳ ಆಧಾರದ ಮೇಲೆ ನೇಮಕಾತಿ ಆದೇಶ ನೀಡಲಾಗುತ್ತದೆ.
ಕೊರೋನಾ ಸಂದರ್ಭದಲ್ಲಿ ಒಂದು ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ಇಲ್ಲದೇ ಎಲ್ಲರನ್ನೂ ಪಾಸ್ ಮಾಡಲಾಗಿದೆ. ನಂತರದ ವರ್ಷಗಳಲ್ಲಿ ಸರಳ ಪ್ರಶ್ನೆ ನೀಡಿ ಪರೀಕ್ಷೆ ನಡೆಸಲಾಗಿದ್ದು, ಇಂತಹ ಬ್ಯಾಚ್ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದಿದ್ದಾರೆ. ಇದರಿಂದ ಕೋವಿಡ್ ಅಲ್ಲದ ಸಂದರ್ಭದಲ್ಲಿ ಪರೀಕ್ಷೆ ಬರೆದು ಪಾಸಾದವರಿಗೆ ಅನ್ಯಾಯವಾಗುತ್ತದೆ ಎಂದು ಸಂಘದ ಅಧ್ಯಕ್ಷ ಕಾಂತಕುಮಾರ್ ತಿಳಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ನಡೆಸಬೇಕೆಂದು ಮನವಿ ಮಾಡಿದ್ದಾರೆ.