ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಕಡ್ಡಾಯಗೊಳಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿಂದ ಬಗ್ಗೆ ಮಾಹಿತಿ ನೀಡಲಾಗಿದೆ. ಮಾರ್ಚ್ 12 ರಿಂದ 16 ವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ಪುರುಷ, ಮಹಿಳಾ ಅಭ್ಯರ್ಥಿಗಳು ತುಂಬು ತೋಳಿನ ಉಡುಪು, ಶೂ, ಆಭರಣ(ಪದಕ, ಮೂಗುಬೊಟ್ಟು, ಕಿವಿಯೋಲೆ, ನೆಕ್ಲೆಸ್, ಬ್ರೇಸ್ಲೆಟ್), ಅಲಂಕಾರಿಕ ಡ್ರೆಸ್ ಧರಿಸುವುದನ್ನು ನಿಷೇಧಿಸಲಾಗಿದೆ.
ಕಡ್ಡಾಯವಾಗಿ ಅರ್ಧ ತೋಳಿನ ಅಂಗಿ, ಸಾದಾ ಪ್ಯಾಂಟ್, ಚಪ್ಪಲಿ ಧರಿಸಿಕೊಂಡು ಪರೀಕ್ಷೆಗೆ ಬರಬೇಕಿದೆ. ಕೊರೋನಾ ಮಾರ್ಗಸೂಚಿ ಪಾಲಿಸಬೇಕಿದೆ. ಅರೆಪಾರದರ್ಶಕ ಸರ್ಜಿಕಲ್ ಮಾಸ್ಕ್ ಗಳನ್ನು ಧರಿಸಿಕೊಂಡು ಬರಬೇಕು. ಎನ್ 95 ಮತ್ತು ಇತರೆ ಮಾಸ್ಕ್ ಹಾಕಿಕೊಂಡು ಬರುವಂತಿಲ್ಲ.
ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಮೊಬೈಲ್, ಇಯರ್ಫೋನ್, ಮೈಕ್ರೋಫೋನ್ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ. ಪೆನ್ಸಿಲ್, ಕಾಗದ ಎರೇಸರ್ ಸ್ಟೇಷನರಿ ವಸ್ತುಗಳನ್ನು ತರುವಂತಿಲ್ಲ. ಕ್ಯಾಲ್ಕುಲೇಟರ್, ಜಾಮಿಟ್ರಿ ತರುವಂತಿಲ್ಲ.
ವ್ಯಾಲೆಟ್, ಅಲಂಕಾರಿಕ ಕನ್ನಡಕ, ಟೋಪಿ, ಬೆಲ್ಟ್, ಕ್ಯಾಮೆರಾ ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಯಾವುದೇ ಬ್ರಾಂಡ್ ಹೆಸರಿಲ್ಲದ ಸಾದಾ ಬಾಟಲಿಯಲ್ಲಿ ಕುಡಿಯುವ ನೀರು ತೆಗೆದುಕೊಂಡು ಹೋಗಬಹುದು. ಇತ್ತೀಚಿನ ಎರಡು ಭಾವಚಿತ್ರ, ಪ್ರವೇಶಪತ್ರ, ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕಿದೆ. ಪ್ರವೇಶ ಪತ್ರಗಳನ್ನು ಫೆಬ್ರವರಿ 28 ರಿಂದ http://kea.kar.nic.in ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.