ನವದೆಹಲಿ: ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ನಡೆಸುವ ಕುರಿತಂತೆ ಕೇಂದ್ರ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಬಹುತೇಕ ರಾಜ್ಯಗಳು ಪರೀಕ್ಷೆ ನಡೆಸಲು ಒಲವು ತೋರಿದ ಹಿನ್ನೆಲೆಯಲ್ಲಿ ಜೂನ್ 1 ರಂದು ಪರೀಕ್ಷೆಯ ಭವಿಷ್ಯ ತೀರ್ಮಾನವಾಗಲಿದೆ ಎಂದು ಹೇಳಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಕೇಂದ್ರ ಶಿಕ್ಷಣ ಸಚಿವರು, ಎಲ್ಲ ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳ ಸಭೆಯಲ್ಲಿ ಪರೀಕ್ಷೆಯ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಹುತೇಕ ಪರೀಕ್ಷೆಗಳನ್ನು ರದ್ದು ಮಾಡಿ, ಅನೇಕ ಪರೀಕ್ಷೆ ಮುಂದೂಡಲಾಗಿದೆ. 12 ನೇ ತರಗತಿ ಪರೀಕ್ಷೆಯಲ್ಲಿ ಬದಲಾವಣೆ ಮಾಡಿ ಕೇವಲ ಸೀಮಿತ ವಿಷಯಗಳಿಗೆ ಮಾತ್ರ ಪರೀಕ್ಷೆಗಳನ್ನು ನಡೆಸುವುದು ಅಥವಾ ಪರೀಕ್ಷೆಯ ಅವಧಿಯನ್ನು ಇಳಿಕೆ ಮಾಡುವುದು ಸೇರಿದಂತೆ ಹಲವು ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.