ಬೆಂಗಳೂರು: ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವ ಮೌಲ್ಯಾಂಕನ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬ್ಲಾಕ್ ಅಥವಾ ತಾಲೂಕು ಹಂತದ ಬದಲು ಅಂತರ್ ಕ್ಲಸ್ಟರ್ ವಾರು ನಿರ್ವಹಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚಿಸಿದೆ.
ಈ ಕುರಿತು ಮಂಡಳಿಯಿಂದ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮಾರ್ಚ್ 31 ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗುವುದರಿಂದ ಒಂದು ಬ್ಲಾಕ್ ನಿಂದ ಮತ್ತೊಂದು ಬ್ಲಾಕ್ ಗೆ ಪ್ರಶ್ನೆಪತ್ರಿಕೆಗಳನ್ನು ಸಾಗಾಣಿಕೆ ಮಾಡಿ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸಲು ಕಾಲಾವಕಾಶದ ಕೊರತೆಯಾಗುತ್ತದೆ. ಹೀಗಾಗಿ ತಾಲೂಕು ಕೇಂದ್ರದಲ್ಲಿಯೇ ಅಂತರ ಕ್ಲಸ್ಟರ್ ವಾರು ಮೌಲ್ಯಮಾಪನ ಮಾಡಿಸಲು ಸೂಚನೆ ನೀಡಲಾಗಿದೆ.
ಏಪ್ರಿಲ್ 1ರಿಂದ 5ರವರೆಗೆ ಐದನೇ ತರಗತಿ ಮತ್ತು ಏಪ್ರಿಲ್ 2ರಿಂದ 7ರವರೆಗೆ 8ನೇ ತರಗತಿ ಮೌಲ್ಯಮಾಪನ ನಡೆಸಬೇಕು. ಮರುದಿನವೇ ಉತ್ತರ ಪತ್ರಿಕೆಗಳನ್ನು ಸಂಬಂಧಿಸಿದ ಶಾಲೆಗಳಿಗೆ ತಲುಪಿಸಬೇಕೆಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ.