ಬೆಂಗಳೂರು: ರಾಜ್ಯ ಪಠ್ಯಕ್ರಮದ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ಮೌಲ್ಯಂಕನ ಪರೀಕ್ಷೆಗೆ ಯಾವ ರೀತಿ ಗ್ರೇಡ್ ನೀಡಬೇಕೆಂಬ ಮಾನದಂಡವನ್ನು ಶಿಕ್ಷಣ ಇಲಾಖೆ ನಿಗದಿಪಡಿಸಿದೆ.
40 ಅಂಕಗಳ ಲಿಖಿತ ಮೌಲ್ಯಾಂಕನ ಮತ್ತು ಶಾಲಾ ಹಂತದಲ್ಲಿ 10 ಅಂಕಗಳ ಮೌಖಿಕ ಮೌಲ್ಯಾಂಕನದಲ್ಲಿ ಪರೀಕ್ಷೆ ನಡೆಸಲಾಗಿದೆ. ಒಟ್ಟಾರೆ 50 ಅಂಕಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸಿ ಗ್ರೇಡ್ ನೀಡಲಾಗುತ್ತದೆ. ಮಾರ್ಚ್ 27ರಿಂದ ಏಪ್ರಿಲ್ 1ರವರೆಗೆ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ಶಾಲಾ ಹಂತದಲ್ಲಿ ಮೌಲ್ಯಾಂಕನ ನಡೆಸಲಾಗಿದೆ.
ಇದನ್ನು ವಾರ್ಷಿಕ ಪರೀಕ್ಷೆಯಾಗಿ ಪರಿಗಣಿಸದೇ ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕಾ ನ್ಯೂನ್ಯತೆ, ವಿಷಯ ಕಲಿಕೆಯಲ್ಲಿ ಎಷ್ಟು ಪ್ರಮಾಣದಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ತಿಳಿಯಲು ನಡೆಸಲಾಗಿದೆ. ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ. ಫಲಿತಾಂಶವನ್ನು ಸಂಬಂಧಿತ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾತ್ರ ತಿಳಿಸುತ್ತಿದ್ದು, ಫಲಿತಾಂಶದಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.