ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿಯವರ ದನಿ ನಕಲು ಮಾಡಿ ಮುಂಬಯಿ ಮೂಲದ ಎಲೆಕ್ಟ್ರಾನಿಕ್ ಶಾಪ್ ಚೇನ್ ಒಂದರ ಎಂಡಿಗೆ 12 ಲಕ್ಷ ರೂ. ಗಳ ವಂಚನೆಯೆಸಗಿದ ಆಪಾದನೆ ಮೇಲೆ ಮಾಜಿ ರಣಜಿ ಆಟಗಾರ ನಾಗರಾಜು ಬುದುಮುರುನನ್ನು ಮುಂಬಯಿಯ ಸೈಬರ್ ಪೊಲೀಸರು ಬಂಧಿಸಿದ್ದಾರೆ.
“ಆಂಧ್ರ ಸಿಎಂ ರ ಫೋಟೋವನ್ನು ಡಿಪಿಯಾಗಿ ಇಟ್ಟುಕೊಂಡು ದೂರವಾಣಿ ಕರೆ ಮೂಲಕ ಎಂಡಿಗೆ ಕರೆ ಮಾಡಿದ ಬುದುಮುರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಹೆಸರಿನಲ್ಲಿ ದುಡ್ಡು ಹೊಂದಿಸಲು ಕೇಳಿದ್ದಾನೆ. ನಾನು ಎನ್‌ಸಿಎ ಹೆಸರಿನಲ್ಲಿ ದುಡ್ಡು ಪಾವತಿ ಮಾಡಿದೆ. ಇದಕ್ಕೆ ಪ್ರತಿಯಾಗಿ ಆಪಾದಿತ ಆಂಧ್ರ ಪ್ರದೇಶ ಕ್ರಿಕೆಟ್ ಸಂಸ್ಥೆಯ ನಕಲಿ ಲೆಟರ್ ಹೆಡ್ ಇದ್ದ ಪತ್ರದಲ್ಲಿ ಸ್ವೀಕೃತಿ ಪತ್ರವೊಂದನ್ನು ಆಂಧ್ರ ಪ್ರದೇಶ ಸಿಎಂರ ನಕಲಿ ವಾಟ್ಸಾಪ್ ನಂಬರ್ ಹಾಗೂ ತಾನು ಸ್ಪಾನ್ಸರ್‌ಶಿಪ್ ಕೇಳಬಯಸಿದ್ದ ಕ್ರಿಕೆಟರ್ ಭುಯಿಯ ಇ-ಮೇಲ್ ಐಡಿ ಮುಖಾಂತರ ಕಳುಹಿಸಿದ್ದಾನೆ” ಎಂದು ಮುಂಬಯಿ ಮೂಲದ ಎಂಡಿ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಬ್ಬ ಕ್ರಿಕೆಟಿಗ ರಿಕಿ ಭುಯಿಗೆ ಪ್ರಾಯೋಜಕತ್ವ ವಹಿಸಲು ಎಲೆಕ್ಟ್ರಾನಿಕ್ ಶಾಪ್ ಒಂದಕ್ಕೆ ಜಗನ್ ಮೋಹನ್ ರೆಡ್ಡಿ ಖುದ್ದು ಶಿಫಾರಸು ಮಾಡುವಂತೆ ಸೀನ್ ಸೃಷ್ಟಿಸಿದ ಬುದುಮುರು ಎಂಬಿಎ ಪದವೀಧರನಾಗಿದ್ದಾನೆ. ಈತ 2014ರಿಂದ 2016ರ ನಡುವೆ ಆಂಧ್ರ ಪ್ರದೇಶದ ಪರ ರಣಜಿ ಟ್ರೋಫಿಯಲ್ಲಿ ಆಡಿದ್ದಾನೆ. 2021 ರಲ್ಲಿ ಈತ ಕೆಟಿ ರಾಮ ರಾವ್‌ರ ವೈಯಕ್ತಿಕ ಕಾರ್ಯದರ್ಶಿಯ ದನಿ ನಕಲು ಮಾಡಿ ಒಂಬತ್ತು ಕಾರ್ಪೋರೇಟ್ ಕಂಪನಿಗಳಿಗೆ 40 ಲಕ್ಷ ರೂ. ಗಳಷ್ಟು ವಂಚನೆಯೆಸಗಿದ್ದ. ಈತ 2018ರಿಂದಲೂ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ 60ಕ್ಕೂ ಹೆಚ್ಚು ಕಾರ್ಪೋರೇಟ್ ಹೌಸ್‌ಗಳಲ್ಲಿ ಮೂರು ಕೋಟಿ ರೂ.ಗಳಷ್ಟು ವಂಚನೆಯೆಸಗಿದ್ದಾನೆ.
ತನ್ನ ಈ ಎಲ್ಲ ಕೃತ್ಯಗಳನ್ನೂ ಒಪ್ಪಿಕೊಂಡಿರುವ ಬುದುಮುರು, ರಾಜಕೀಯ ಪಕ್ಷವೊಂದರ ಸ್ಪೀಕರ್ ಒಬ್ಬರು ತನಗೆ 15 ಲಕ್ಷ ರೂ.ಗಳ ವಂಚನೆಯೆಸಗಿದ್ದು, ಅದರಿಂದ ತಮ್ಮ ಕ್ರಿಕೆಟ್ ವೃತ್ತಿ ಜೀವನ ಹಾಳಾದ ಕಾರಣ ಅದರಿಂದ ಬೇಸರಗೊಂಡು ಹೀಗೆ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಮಾಜಿ ಕ್ರಿಕೆಟರ್ ಗಳು ಹಾಗೂ ಮುಖ್ಯಮಂತ್ರಿಗಳ ದನಿಯಲ್ಲಿ ಮಾತನಾಡುವ ಮೂಲಕ ಕಾರ್ಪೋರೇಟ್ ಹೌಸ್‌ಗಳಿಗೆ ಸ್ಪಾನ್ಸರ್‌ಶಿಪ್ ಕೋರುತ್ತಾ ಬಂದಿರುವ ಬುದುಮುರುನನ್ನು ಹೈದರಾಬಾದ್ ಪೊಲೀಸರು ಈ ಮುಂಚೆಯೂ ಬಂಧಿಸಿದ್ದರು. ಇಂಥದ್ದೇ ಪ್ರಕರಣಗಳಲ್ಲಿ ಈತನ ವಿರುದ್ಧ ಅದಾಗಲೇ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.