ತಾಡೇಪಲ್ಲಿ: ಮಾಜಿ ಸಚಿವ ಬಿ. ಶ್ರೀರಾಮುಲು ಸಹೋದರಿ, ಮಾಜಿ ಸಂಸದೆ ಜೆ. ಶಾಂತಾ ಅವರು ವೈ.ಎಸ್.ಆರ್. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ತಾಡೇಪಲ್ಲಿಯ ಕ್ಯಾಂಪ್ ಕಚೇರಿಯಲ್ಲಿ ಮುಖ್ಯಮಂತ್ರಿ ವೈ.ಜಗನ್‌ಮೋಹನ್ ರೆಡ್ಡಿ ಅವರ ಸಮ್ಮುಖದಲ್ಲಿ ಮಾಜಿ ಸಂಸದೆ, ಬಿಜೆಪಿ ಮುಖಂಡರಾದ ಜೆ. ಶಾಂತಾ ಮಂಗಳವಾರ ವೈಎಸ್‌ಆರ್‌ಸಿಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಸದ ಪೆದ್ದಿರೆಡ್ಡಿ ಮಿಥುನ್ ರೆಡ್ಡಿ ಭಾಗವಹಿಸಿದ್ದರು. ಅನಂತಪುರ ಜಿಲ್ಲೆಯ ಗುಂತಕಲ್ಲಿನ ಜೆ.ಶಾಂತ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. 2009ರಲ್ಲಿ ಕರ್ನಾಟಕದ ಬಳ್ಳಾರಿಯಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಸಂಸದರಾಗಿದ್ದರು.
ಈ ವೇಳೆ ಮಾತನಾಡಿದ ಶಾಂತಾ, ಜಗನ್ ಅವರ ಆಡಳಿತದಲ್ಲಿ ವಾಲ್ಮೀಕಿಗಳಿಗೆ ಆದ್ಯತೆ ದೊರೆತಿದೆ. ವೈಎಸ್‌ಆರ್‌ಸಿಪಿಯ ತತ್ವಗಳನ್ನು ನೋಡಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ದೇಶದಲ್ಲಿ ಯಾರೂ ಮಾಡದ ಕಲ್ಯಾಣ ಯೋಜನೆಗಳನ್ನು ಜಗನ್ ಜಾರಿಗೊಳಿಸುತ್ತಿದ್ದಾರೆ ಎಂದು ಹೊಗಳಿದರು. ಇನ್ನು ಮುಂದೆ ವೈ.ಎಸ್.ಆರ್.ಸಿ.ಪಿ.ಯಲ್ಲಿ ಸಾಮಾನ್ಯ ಕಾರ್ಯಕರ್ತಳಾಗಿ ಕೆಲಸ ಮಾಡುತ್ತೇನೆ. ಅವಕಾಶ ಸಿಕ್ಕರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಹಿಂದೂಪುರಂ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪಕ್ಷದ ನಿರ್ದೇಶನದಂತೆ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ.