ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮಾಜಿ ಶಾಸಕ ಎಸ್.ಎಂ. ನಾಗರಾಜ್ ಅವರ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ.
ಸಿರಗನಹಳ್ಳಿ ತೋಟದ ಮನೆಯಲ್ಲಿ ಶನಿವಾರ ಮಧ್ಯರಾತ್ರಿ ಮಾಸ್ಕ್ ಮತ್ತು ಮಂಕಿ ಕ್ಯಾಪ್ ಧರಿಸಿ ಬಂದಿದ್ದ ದರೋಡೆಕೋರರು ಬಾಗಿಲು ಮುರಿದು ಒಳನುಗ್ಗಿ ನಗದು, ಚಿನ್ನಾಭರಣ ದೋಚಿದ್ದಾರೆ.
ಅಜ್ಜಂಪುರದ ಸಮುದಾಯ ಭವನದಲ್ಲಿ ಭಾನುವಾರ ನಡೆಯಬೇಕಿದ್ದ ಮದುವೆಗೆ ಸಂಬಂಧಿಕರು ಬಂದು ತಂಗಿದ್ದರು. ನಾಗರಾಜ್ ಅವರ ಪತ್ನಿ ಪುಷ್ಪಾ ಶನಿವಾರ ರಾತ್ರಿ ಶಬ್ದ ಬಂದ ಕಾರಣ ಬಾಗಿಲು ತೆರೆದು ಹೊರ ಬಂದಾಗ ದರೋಡೆಕೋರರು ಒಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟು ಹುಡುಕಾಡಿದ್ದು, 75,000 ರೂ.ಸಿಕ್ಕಿದೆ.
ಮಹಿಳೆಯರ ಮೈ ಮೇಲಿದ್ದ ಚಿನ್ನಾಭರಣವನ್ನು ಬೆದರಿಸಿ ಪಡೆದುಕೊಂಡಿದ್ದಾರೆ. ಮಹಡಿ ಮೇಲಿದ್ದ ಶಾಸಕರ ಪುತ್ರ ಲೋಹಿತ್ ಕೊಠಡಿಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆ. ಪಿಸ್ತೂಲು, ಲಾಂಗ್ ತೋರಿಸಿ ಬೆದರಿಕೆ ಹಾಕಿ ಎಲ್ಲರನ್ನೂ ಒಂದೇ ಕೊಠಡಿಯಲ್ಲಿ ಕೂಡಿಹಾಕಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ನಾಗರಾಜ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಡಿವೈಎಸ್ಪಿ ನಾಗರಾಜ್ ಸೇರಿದಂತೆ ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೂಡಲೇ ತನಿಖೆ ಕೈಗೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.