ತಮ್ಮ ಮನೆಯ ಮುಂದೆ ದೀಪ ಹಾಗೂ ದೀಪಾವಳಿಗೆ ಸಂಬಂಧಿಸಿದ ವಸ್ತುಗಳ ಮಾರಾಟದ ಅಂಗಡಿ ಹಾಕಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಾಜಿ ಐಎಎಸ್ ಅಧಿಕಾರಿಯೊಬ್ಬರ ಪುತ್ರಿ ಬ್ಯಾಟ್ ತಂದು ದೀಪಗಳನ್ನು ಧ್ವಂಸಗೊಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಿವೃತ್ತ ಐಎಎಸ್ ಅಧಿಕಾರಿ ಶಂಕರ್ ಲಾಲ್ ಅವರ ಪುತ್ರಿ ಈ ಕೃತ್ಯವೆಸಗಿದ್ದು, ಅಂಗಡಿ ತೆರೆದಿದ್ದ ಈ ಬಡ ಜನತೆ ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಳಿದರೂ ಸಹ ಅದನ್ನು ಕೇಳದೆ ಮೊದಲಿಗೆ ವಸ್ತುಗಳ ಮೇಲೆ ನೀರು ಸುರಿದು ಬಳಿಕ ಬ್ಯಾಟಿನಿಂದ ದೀಪಗಳನ್ನು ಒಡೆದು ಹಾಕಿದ್ದಾರೆ.
ಲಕ್ನೋದ ಗೋಮತಿ ನಗರದಲ್ಲಿ ಈ ಘಟನೆ ನಡೆದಿದ್ದು, ಮೊದಲಿಗೆ ಮನೆ ಮುಂದೆ ಹಾಕಿರುವ ಅಂಗಡಿ ತೆರೆಯುವಂತೆ ಈ ಯುವತಿ ಹೇಳಿದ್ದಾಳೆ. ಅಂಗಡಿಯವರು ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಳಿದ್ದು, ಆಗ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಮಾಜಿ ಐಎಎಸ್ ಅಧಿಕಾರಿಯ ಪುತ್ರಿಯಾಗಿದ್ದ ಕಾರಣ ಯಾರೊಬ್ಬರೂ ಈ ವೇಳೆ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ.
ಇದೀಗ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮಾಜಿ ಐಎಎಸ್ ಅಧಿಕಾರಿಯ ಪುತ್ರಿ ದೌರ್ಜನ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಬಡ ವ್ಯಾಪಾರಿಗಳಿಗೆ ದಂಡ ಕಟ್ಟಿ ಕೊಡುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.