ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಗುಜರಾತ್ ಮಾಜಿ ಸಚಿವ ಕಾಂತಿ ಗಮಿತ್ ಅವರನ್ನು ಬಂಧಿಸಲಾಗಿದೆ.
ತಮ್ಮ ಮೊಮ್ಮಗಳ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾರಿ ಸಂಖ್ಯೆ ಜನರನ್ನು ಸೇರಿಸಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ನವೆಂಬರ್ 30 ರಂದು ಟಾಪಿ ಜಿಲ್ಲೆಯ ದೋಸ್ವಾಡ ಗ್ರಾಮದಲ್ಲಿ ಕಾರ್ಯಕ್ರಮ ನಡೆದಿತ್ತು. ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನೂರಾರು ಜನರನ್ನು ಕರೆಸಿ ಅದ್ದೂರಿ ಸಮಾರಂಭ ನಡೆಸಲಾಗಿದೆ. ಭಾಗಿಯಾಗಿದ್ದ ಜನರು ನೃತ್ಯ ಮಾಡಿರುವುದು ಕೂಡ ಕಂಡು ಬಂದಿದೆ.
ಈ ಸಮಾರಂಭದ ವಿಡಿಯೋ ವೈರಲ್ ಆಗಿ ಗುಜರಾತ್ ಹೈಕೋರ್ಟ್ ತಕ್ಷಣವೇ ಕ್ರಮಕ್ಕೆ ಪೊಲೀಸರಿಗೆ ತಾಕೀತು ಮಾಡಿತ್ತು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 308 ರಡಿ ಹಾಗೂ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.
ತಮ್ಮ ತಪ್ಪಿಗೆ ಕ್ಷಮೆಯಾಚಿಸುವುದಾಗಿ ಕಾಂತಿ ಗಮಿತ್ ತಿಳಿಸಿದ್ದಾರೆ. ತುಳಸಿ ವಿವಾಹ ಮತ್ತು ಮೊಮ್ಮಗಳ ನಿಶ್ಚಿತಾರ್ಥ ಸಮಾರಂಭವನ್ನು ಒಟ್ಟಿಗೆ ಆಯೋಜಿಸಲಾಗಿತ್ತು. ಯಾರನ್ನೂ ವೈಯಕ್ತಿಕವಾಗಿ ನಾವು ಕರೆದಿರಲಿಲ್ಲ. ಎರಡು ಸಾವಿರ ಮಂದಿಗೆ ಅಡುಗೆ ಮಾಡಿದ್ದೇವೆ. ಡ್ಯಾನ್ಸ್ ಆಯೋಜಿಸಿದ್ದೇವೆ ಎಂದು ಯಾರೋ ವಿಡಿಯೋ ಮಾಡಿದ್ದು ಅದು ವೈರಲ್ ಆಗಿದೆ ಎಂದು ಹೇಳಿದ್ದಾರೆ.