ಕಾನ್ಪುರ: ಆಸ್ಪತ್ರೆಗಳ ನಿರ್ಲಕ್ಷ್ಯದ ಮತ್ತೊಂದು ಘಟನೆ ನಡೆದಿದ್ದು, ಜೀವಂತವಾಗಿರುವ 5 ಕೋವಿಡ್ ರೋಗಿಗಳು ಸತ್ತಿದ್ದಾರೆ ಎಂದು ಆಸ್ಪತ್ರೆಯ ದಾಖಲೆಗಳಲ್ಲಿ ಘೋಷಿಸಲಾಗಿದೆ.
ಕೋವಿಡ್ ನಿಂದ ಸಾವನ್ನಪ್ಪಿದ ಜನರ ಹೆಸರುಗಳನ್ನು ಒಳಗೊಂಡ ಪಟ್ಟಿ ಅನುಸಾರ ಅವರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಕಾನ್ಪುರ ಆಡಳಿತಕ್ಕೆ ವರದಿ ಕಳುಹಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಸರ್ಕಾರದ ಸೂಚನೆ ಮೇರೆಗೆ ಕೋವಿಡ್ ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ 50,000 ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. ಆದರೆ, ಕಂದಾಯ ಇಲಾಖೆ ಸರ್ಕಾರದಿಂದ ಪಟ್ಟಿಯನ್ನು ಪಡೆದಾಗ, ಪಟ್ಟಿಯಲ್ಲಿ ಸತ್ತವರೆಂದು ತೋರಿಸಲ್ಪಟ್ಟ ಕೆಲವರು ಜೀವಂತವಾಗಿರುವುದನ್ನು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಮೂರು ಪ್ರಕರಣಗಳು ಜಿಎಸ್‌ವಿಎಂ ವೈದ್ಯಕೀಯ ಕಾಲೇಜಿಗೆ ಸಂಯೋಜಿತವಾಗಿರುವ ಆಸ್ಪತ್ರೆಗಳಿಂದ ಬಂದಿದ್ದು, ತಲಾ ಒಂದು ನಾರಾಯಣ ವೈದ್ಯಕೀಯ ಕಾಲೇಜು ಮತ್ತು ಎಂಕೆಸಿಎಚ್ ಆಸ್ಪತ್ರೆಯಿಂದ ಬಂದವು ಎಂದು ತಿಳಿದುಬಂದಿದೆ.
ಸಿಎಂಓ ನೇಪಾಲ್ ಸಿಂಗ್ ಅವರಿಗೆ ತನಿಖೆಯನ್ನು ಹಸ್ತಾಂತರಿಸಿದ ಡಿಎಂ ನೇಹಾ ಶರ್ಮಾ ಅವರು, ಎಲ್ಲಾ ಐದು ಪ್ರಕರಣಗಳಲ್ಲಿ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದು, ಎಲ್ಲಾ ಆಸ್ಪತ್ರೆಗಳಿಂದ ಸ್ಪಷ್ಟನೆ ಕೇಳಲಾಗಿದೆ.
ಸಿಎಂಒ ನೇಪಾಲ್ ಸಿಂಗ್ ಅವರು, ಜಿಎಸ್‌ವಿಎಂ ವೈದ್ಯಕೀಯ ಕಾಲೇಜು ನೀಡಿದ ಸ್ಪಷ್ಟನೆಯಲ್ಲಿ, ಈ ಜನರ ವರದಿಗಳನ್ನು ಪೋರ್ಟಲ್ ಗೆ ಅಪ್ ಲೋಡ್ ಮಾಡಿದ ಸಮಯದಲ್ಲಿ, ‘ಡಿಸ್ಚಾರ್ಜ್’ ಬದಲಿಗೆ ‘ಸಾವು’ ಎಂದು ತಪ್ಪಾಗಿ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನೆರಡು ಆಸ್ಪತ್ರೆಗಳಾದ ನಾರಾಯಣ ಮತ್ತು ಎಂಕೆಸಿಎಚ್ ಆಸ್ಪತ್ರೆಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಾರ್ಚ್ 22 ರೊಳಗೆ ಈ ಎರಡು ಆಸ್ಪತ್ರೆಗಳು ಸ್ಪಂದಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.