ಮುಂಬೈ ಮೇಲಾದ 26/11 ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್‌ನಿಂದ ವಶಕ್ಕೆ ಪಡೆಯಲಾದ ಮೊಬೈಲ್ ಫೋನ್ ಅನ್ನು ಮುಂಬೈ ಪೊಲೀಸ್‌ನ ಮಾಜಿ ಆಯುಕ್ತ ಪರಂ ಬೀರ್ ಸಿಂಗ್ ನಾಶ ಮಾಡಿದ್ದರೆಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಮಾಯಾನಗರಿಯ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ಕೊಟ್ಟಿರುವ ನಿವೃತ್ತ ಎಸಿಪಿ ಶಂಶೇರ್ ಖಾನ್ ಪಠಾಣ್, ಇಡೀ ಪ್ರಕರಣದ ತನಿಖೆ ನಡೆಸಿ, ಪರಂ ಬೀರ್ ಸಿಂಗ್ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲು ವಿನಂತಿಸಿದ್ದಾರೆ.
ಪಠಾಣ್ ಅವರು ಜುಲೈನಲ್ಲೇ ಈ ಸಂಬಂಧ ದೂರು ನೀಡಿದ್ದರೂ ಸಹ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಸುಲಿಗೆ ಆರೋಪವೊಂದರಲ್ಲಿ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾದ ದೂರಿನ ಸಂಬಂಧ ಮುಂಬೈ ಕ್ರೈಂ ಬ್ರಾಂಚ್ ಎದುರು ಬಂದು ಹೇಳಿಕೆ ಕೊಟ್ಟ ಪರಂ ಮೇಲೆ ಮೇಲ್ಕಂಡ ಆರೋಪ ಕೇಳಿ ಬಂದಿದೆ.
ಸಿಂಗ್ ಈ ವರ್ಷ ಮುಂಬೈ ಪೊಲೀಸ್ ಮುಖ್ಯಸ್ಥರ ಹುದ್ದೆಯಿಂದ ನಿರ್ಗಮಿಸಿದ್ದು, ತೆರವಾದ ಸ್ಥಾನಕ್ಕೆ ಐಪಿಎಸ್ ಅಧಿಕಾರ ಹೇಮಂತ್ ನಗ್ರಾಲೆ ಬಂದಿದ್ದಾರೆ.
26/11 ರ ದಾಳಿ ಸಂದರ್ಭ ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಹಿರಿಯ ನಿರೀಕ್ಷಕರಾಗಿದ್ದ ಎನ್.ಆರ್. ಮಾಲಿ ಅವರು ಕಸಬ್‌ನಿಂದ ವಶಪಡಿಸಿಕೊಂಡ ಮೊಬೈಲ್ ಅನ್ನು ಪೇದೆಯೊಬ್ಬರಿಗೆ ಕೊಟ್ಟಿರುವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ಪಠಾಣ್ ತಿಳಿಸಿದ್ದಾರೆ. ಅಂದಿನ ದಿನದಲ್ಲಿ ಭಯೋತ್ಪಾದಕ ನಿಗ್ರಹ ದಳದ ಡಿಐಜಿ ಆಗಿದ್ದ ಸಿಂಗ್, ಪೇದೆಯಿಂದ ಮೊಬೈಲ್ ಪಡೆದುಕೊಂಡಿದ್ದು, ಭಯೋತ್ಪಾದಕ ದಾಳಿಯ ತನಿಖಾಧಿಕಾರಿ ರಮೇಶ್ ಮಾಳೆಗೆ ಹಸ್ತಾಂತರಿಸುವ ಬದಲಿಗೆ ’ಸಾಕ್ಷಿಯನ್ನು ನಾಶಪಡಿಸಿದ್ದಾರೆ’ ಎಂದು ಆಪಾದಿಸಿದ್ದಾರೆ. ಈ ದೂರಿನ ಬಗ್ಗೆ ಸಿಂಗ್‌ರಿಂದ ಯಾವುದೇ ಪ್ರತಿಕ್ರಿಯೆ ಕೇಳಿ ಬಂದಿಲ್ಲ.
13 ವರ್ಷಗಳ ಹಿಂದೆ ನಡೆದ ಈ ಭಯೋತ್ಪಾದಕ ದಾಳಿ ವೇಳೆ ಕಸಬ್‌ನನ್ನು ಜೀವಂತ ಸೆರೆ ಹಿಡಿಯಲಾಗಿತ್ತು. ನಾಲ್ಕು ವರ್ಷಗಳ ನ್ಯಾಯಾಂಗ ತನಿಖೆ ಬಳಿಕ ಸುಪ್ರೀಂ ಕೋರ್ಟ್ ಆದೇಶದಂತೆ ಕಸಬ್‌ನನ್ನು 2012ರ ನವೆಂಬರ್‌ನಲ್ಲಿ ಗಲ್ಲಿಗೇರಿಸಲಾಗಿತ್ತು.