ಬೆಂಗಳೂರು: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಪ್ತ ಸಹಾಯಕನ ಹೆಸರಲ್ಲಿ ಸಂಗೀತಾ ಮೊಬೈಲ್ಸ್ ಗೆ ವಂಚಿಸಲಾಗಿದೆ.
ಪ್ರಾಯೋಜಕತ್ವದ ನೆಪದಲ್ಲಿ ಸಂಗೀತಾ ಮೊಬೈಲ್ಸ್ ಕಂಪನಿಯಿಂದ 10.40 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪದಡಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಬನಶಂಕರಿ 2ನೇ ಹಂತದ ಸಂಗೀತಾ ಮೊಬೈಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ವ್ಯವಸ್ಥಾಪಕ ಕೆ.ಬಿ. ರಾಜೇಶ್ ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದೂರುದಾರ ರಾಜೇಶ್ ಅವರ ಮೊಬೈಲ್ ಗೆ ಎರಡು ವರ್ಷದ ಹಿಂದೆ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ್ದ ವ್ಯಕ್ತಿ ಆಂಧ್ರಪ್ರದೇಶ ಸಿಎಂ ಜಗನ್ಮೋಹನ್ ರೆಡ್ಡಿ ಅವರ ಆಪ್ತ ಸಹಾಯಕ ಕೆ.ಎನ್. ನಾಗೇಶ್ವರ ರೆಡ್ಡಿ ಎಂದು ಪರಿಚಯಿಸಿಕೊಂಡಿದ್ದಾನೆ. ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯಿಂದ ಆಟವಾಡುತ್ತಿರುವ ರಿತಿ ಭುವಿ ಎಂಬ ಆಟಗಾರನಿಗೆ ಪ್ರಾಯೋಜಕತ್ವದ ಅಗತ್ಯವಿದ್ದು, ಆತನಿಗೆ ನಿಮ್ಮ ಕಂಪನಿಯಿಂದ ಕ್ರಿಕೆಟ್ ಪ್ರಾಯೋಜಕತ್ವ ನೀಡುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ 10.40 ಲಕ್ಷ ರೂ. ವೆಚ್ಚವಾಗಲಿದ್ದು, ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಖಾತೆಯ ವಿವರ ನೀಡಿದ್ದಾನೆ.
ಆತನ ಮಾತು ನಂಬಿದ ರಾಜೇಶ್ 2022ರ ಮೇ 10 ಮತ್ತು 11ರಂದು 5.20 ಲಕ್ಷ ರೂ.ನಂತೆ ಒಟ್ಟು 10.40 ಲಕ್ಷ ರೂ. ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ನಂತರ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸದೆ ಸಂಪರ್ಕ ಕಳೆದುಕೊಂಡಿದ್ದಾನೆ. ಅನುಮಾನಗೊಂಡು ವಿಚಾರಿಸಿದಾಗ ಆಂಧ್ರಪ್ರದೇಶ ಮುಖ್ಯಮಂತ್ರಿ ಆಪ್ತ ಸಹಾಯಕ ನಾಗೇಶ್ವರ ರೆಡ್ಡಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸಿರುವುದು ಗೊತ್ತಾಗಿದೆ. ಹೀಗಾಗಿ ಅಪರಿಚಿತ ವಂಚಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.