ನವದೆಹಲಿ: ಪರಿಶಿಷ್ಟ ಜಾತಿಗೆ ಸೇರಿದವರು ಬೇರೆ ಧರ್ಮಗಳಿಗೆ ಮತಾಂತರಗೊಂಡ ಸಂದರ್ಭದಲ್ಲಿ ಅವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ಮುಂದುವರೆಸಬೇಕೆಂಬುದರ ಕುರಿತು ಪರಿಶೀಲಿಸಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣ ನೇತೃತ್ವದ ವಿಚಾರಣಾ ಆಯೋಗ ನೇಮಿಸಿದೆ. ಈ ಆಯೋಗದ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ಡಾ. ರವೀಂದರ್ ಕುಮಾರ್ ಜೈನ್ ಮತ್ತು ಪ್ರಾಧ್ಯಾಪಕಿ ಸುಷ್ಮಾ ಯಾದವ್ ಅವರನ್ನು ನೇಮಕ ಮಾಡಲಾಗಿದೆ.
ಮೂಲದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ್ದು, ಅನ್ಯ ಧರ್ಮಕ್ಕೆ ಮತಾಂತರಗೊಂಡರೆ ಮತ್ತೆ ಅದೇ ಸ್ಥಾನಮಾನ ನೀಡಿಕೆ ಕುರಿತಾಗಿ ಈ ಆಯೋಗ ಪರಿಶೀಲನೆ ನಡೆಸಲಿದೆ. ಈ ಮೊದಲು ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದು, ರಾಷ್ಟ್ರಪತಿ ಆದೇಶದಲ್ಲಿ ನಮೂದಾಗದ ಧರ್ಮಕ್ಕೆ ಮತಾಂತರಗೊಂಡವರಿಗೆ ಸ್ಥಾನಮಾನ ನೀಡುವ ವಿಚಾರದ ಬಗ್ಗೆ ಆಯೋಗ ಪರಿಶೀಲನೆ ನಡೆಸಲಿದೆ.
ರಾಷ್ಟ್ರಪತಿಯವರ ಆದೇಶದಲ್ಲಿ ಉಲ್ಲೇಖವಾಗದ ಧರ್ಮಕ್ಕೆ ಮತಾಂತರಗೊಂಡ ಚಾರಿತ್ರಿಕವಾಗಿ ಪರಿಶಿಷ್ಟ ಜಾತಿಗೆ ಸೇರಿದವರಿಗೆ ಪರಿಶಿಷ್ಟ ಜಾತಿಯ ಸ್ಥಾನ ನೀಡಬೇಕೆಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ರಾಷ್ಟ್ರಪತಿಗಳ ಆದೇಶದ ಪ್ರಕಾರ, ಮತಾಂತರದ ನಂತರ ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಸಿಖ್ ಧರ್ಮವನ್ನು ಅನುಸರಿಸುವವರಿಗೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನ ದೊರೆಯುತ್ತದೆ.
ಬೇರೆ ಧರ್ಮಗಳಿಗೆ ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿಯ ವ್ಯಕ್ತಿಗಳ ಪದ್ಧತಿ, ಸಂಪ್ರದಾಯ, ಸಾಮಾಜಿಕ ಸ್ಥಾನಮಾನ ಮತ್ತು ಅವರು ಅನುಭವಿಸುತ್ತಿದ್ದ ಶೋಷಣೆ ಹಾಗೂ ತಾರತಮ್ಯದಲ್ಲಿ ಆಗಿರುವ ಬದಲಾವಣೆಯ ಕುರಿತಾಗಿ ಆಯೋಗ ಪರಿಶೀಲನೆ ನಡೆಸುತ್ತದೆ. ಪರಿಶಿಷ್ಟ ಜಾತಿ ಸ್ಥಾನ ನೀಡುವುದರಿಂದ ಅವರ ಮೇಲಾಗುವ ಪರಿಣಾಮಗಳ ಕುರಿತು ಆಯೋಗ ಅಧ್ಯಯನ ಕೈಗೊಳ್ಳಲಿದೆ. ಈ ಆಯೋಗಕ್ಕೆ ವರದಿ ಸಲ್ಲಿಸಲು ಎರಡು ವರ್ಷ ಸಮಯ ನೀಡಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.