ಪ್ರಸ್ತುತ ಲೋಕಸಭೆ ಚುನಾವಣೆಯ ಹೊತ್ತಲ್ಲಿ ಬಿಜೆಪಿಗೆ ಕೇಂದ್ರ ಮಾಜಿ ಸಚಿವ ಜಯಂತ್ ಸಿನ್ಹಾ ಅವರ ಕುಟುಂಬ ಶಾಕ್ ನೀಡಿದ್ದು ಜಯಂತ್ ಪುತ್ರ ಆಶೀರ್ ಸಿನ್ಹಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಜಾರ್ಖಂಡ್ ನಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ ಸಿನ್ಹಾ ಕೈ ಪಕ್ಷ ಸೇರಿಕೊಂಡರು. ಹಜಾರಿಬಾಗ್‌ನ ಬಿಜೆಪಿ ಸಂಸದ ಮತ್ತು ನರೇಂದ್ರ ಮೋದಿ ಸರ್ಕಾರದ ಮಾಜಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು. ಜಯಂತ್ ಸಿನ್ಹಾ ಅವರು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಮಗ.
ಆಶೀರ್ ಅವರ ತಂದೆ ಜಯಂತ್ ಸಿನ್ಹಾ ಅವರಿಗೆ ಪ್ರಸ್ತುತ ಸಂಸದರಾಗಿರುವ ಹಜಾರಿಬಾಗ್‌ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಹಜಾರಿಬಾಗ್‌ನಿಂದ ಕಾಂಗ್ರೆಸ್‌ನ ಜೈ ಪ್ರಕಾಶ್ ಭಾಯ್ ಪಟೇಲ್ ವಿರುದ್ಧ ಬಿಜೆಪಿ ಶಾಸಕ ಮನೀಶ್ ಜೈಸ್ವಾಲ್ ಅವರನ್ನು ಕಣಕ್ಕಿಳಿಸಿದೆ. ಇಲ್ಲಿ ಮೇ 20 ರಂದು ಚುನಾವಣೆ ನಡೆಯಲಿದೆ.
ಗಮನಾರ್ಹ ವಿಷಯವೆಂದರೆ, 1998 ರ ನಂತರ ಯಶವಂತ್ ಸಿನ್ಹಾ ಅವರ ಕುಟುಂಬದ ಯಾವುದೇ ಸದಸ್ಯರು ಇದೇ ಮೊದಲ ಬಾರಿಗೆ ಹಜಾರಿಬಾಗ್‌ನಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಇದಕ್ಕಾಗಿಯೇ ಯಶವಂತ್ ಸಿನ್ಹಾ ಅವರ ಸಾಂಪ್ರದಾಯಿಕ ಮತ ಬ್ಯಾಂಕ್ ಅನ್ನು ಸೆಳೆಯಲು ಕುಟುಂಬದ ಸದಸ್ಯರಲ್ಲಿ ಒಬ್ಬರು ಕಾಂಗ್ರೆಸ್ ಸೇರಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಉಲ್ಲೇಖಿಸಿವೆ.