ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಲ್ ನಬೀಜಾದ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಭಾನುವಾರದಂದು ಕಾಬೂಲ್ ನಲ್ಲಿರುವ ಅವರ ನಿವಾಸದಲ್ಲಿಯೇ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಈ ಸಂದರ್ಭದಲ್ಲಿ ಮುರ್ಸಲ್ ಅವರ ಅಂಗರಕ್ಷಕ ಕೂಡ ಸಾವಿಗೀಡಾಗಿದ್ದಾನೆ.
ಶಸ್ತ್ರ ಸಜ್ಜಿತರಾಗಿ ಬಂದಿದ್ದ ದಾಳಿಕೋರರು ಮನೆಗೆ ನುಗ್ಗಿ ಏಕಾಏಕಿ ಗುಂಡು ಹಾರಿಸಲು ಆರಂಭಿಸಿದ್ದು, ತಡೆಯಲು ಬಂದ ಮುರ್ಸಲ್ ಅವರ ಸಹೋದರ ಕೂಡ ಗಾಯಗೊಂಡಿದ್ದಾನೆ. ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮುರ್ಸಲ್ ಹಾಗೂ ಅವರ ಅಂಗರಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ನಿಂದ ಅಮೆರಿಕಾ ಮುಕ್ತಿಗೊಳಿಸಿದ ಬಳಿಕ ಸ್ಥಾಪನೆಯಾದ ಸರ್ಕಾರದಲ್ಲಿ ಮುರ್ಸಲ್ ನಬೀಜಾದ ಸಂಸದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಫ್ಘಾನಿಸ್ತಾನ ಮತ್ತೆ ತಾಲಿಬಾನಿಗಳ ಕೈವಶವಾದ ಬಳಿಕವೂ ಮುರ್ಸಲ್ ಕಾಬೂಲ್ ನಲ್ಲಿಯೇ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು.