
ಪ್ರಸ್ತುತ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಂಕುರಾದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಸಮಗ್ರತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಭಾರತೀಯ ಜನತಾ ಪಕ್ಷವು (ಬಿಜೆಪಿ) ಇವಿಎಂ ನಲ್ಲಿನ ಮತಗಳನ್ನು ತಿದ್ದುವ ಮೂಲಕ ಅಕ್ರಮವಾಗಿ ಮತಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ರಘುನಾಥಪುರ ಪ್ರದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟ್ಯಾಗ್‌ಗಳನ್ನು ಹೊಂದಿರುವ 5 ಇವಿಎಂಗಳ ಚಿತ್ರಗಳನ್ನು ಹಂಚಿಕೊಂಡು ಬಿಜೆಪಿ ಅಕ್ರಮ ನಡೆಸುತ್ತಿದೆ ಎಂದು ಆರೋಪಿಸಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಅನ್ಯಾಯದ ಲಾಭ ಪಡೆಯಲು ಬಿಜೆಪಿಯು ತಮ್ಮ ಟ್ಯಾಗ್‌ಗಳೊಂದಿಗೆ ಇವಿಎಂಗಳನ್ನು ಬಳಸುತ್ತಿದೆ ಎಂದು ಟಿಎಂಸಿ ಆರೋಪಿಸಿದ್ದು ಈ ಬಗ್ಗೆ ತ್ವರಿತವಾಗಿ ತನಿಖೆ ನಡೆಸುವಂತೆ ಚುನಾವಣಾ ಆಯೋಗವನ್ನು (ಇಸಿ) ಒತ್ತಾಯಿಸಿದೆ.
ಆರೋಪಗಳಿಗೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ (EC), ಮತದಾನದ ಕಾರ್ಯಾರಂಭದಲ್ಲಿ ವಿವಿಪ್ಯಾಟ್ ಮತ್ತು ಇವಿಎಂ ಪರೀಶೀಲನೆ ವೇಳೆ ಅಭ್ಯರ್ಥಿಗಳು ಅಥವಾ ಅವರ ಪರ ಏಜೆಂಟ್ ಗಳ ಸಹಿ ಪಡೆಯುವ ಪ್ರಕ್ರಿಯೆ ವೇಳೆ ಬಿಜೆಪಿ ಏಜೆಂಟ್ ಮಾತ್ರ ಹಾಜರಿದ್ದರು.
ಅವರ ಸಹಿ ಪಡೆದ ಬಳಿಕ ಮತದಾನದ ವೇಳೆ ಎಲ್ಲ ಏಜೆಂಟರ ಸಹಿ ಪಡೆಯಲಾಯಿತು. ಇಡೀ ಮತದಾನ ಪ್ರಕ್ರಿಯೆ ಸಿಸಿಕ್ಯಾಮೆರಾ ಮತ್ತು ವಿಡಿಯೋ ಚಿತ್ರೀಕರಣದ ಕಣ್ಗಾವಲಿನಲ್ಲಿ ನಡೆದಿದೆ ಎಂದು ಹೇಳಿದೆ.