ಬೆಂಗಳೂರು : ನಾಳೆ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟನೆ ನಡೆಸಲಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ರಾಜ್ಯದ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ, ನಮ್ಮ ಸ್ವಾಭಿಮಾನಿ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಕತ್ತು ಕುಯ್ಯಬಾರದು
ಉತ್ತರದ ರಾಜ್ಯಗಳಿಗೆ ಅನುದಾನ ಕೊಡಬೇಡಿ ಎಂದು ಹೇಳುವುದಿಲ್ಲ. ಆದರೆ ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ. ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಕತ್ತು ಕುಯ್ಯಬಾರದು, ಹಾಲು ಕೊಡುವ ಕೆಚ್ಚಲನ್ನೇ ಕತ್ತರಿಸಬಾರದು ಎನ್ನುವುದು ನಮ್ಮ ಮನವಿ. ನಮ್ಮ ನಿರಂತರ ಬೇಡಿಕೆ, ಮನವಿಗಳಿಗೂ ಕೇಂದ್ರ ಬೆಲೆ ಕೊಟ್ಟಿಲ್ಲ.
ಯಡಿಯೂರಪ್ಪ, ಬೊಮ್ಮಾಯಿ ಅವರು ಪ್ರಧಾನಿಗಳ ಮುಂದೆ ಬಾಯಿ ಬಿಡುವುದಿಲ್ಲ. ವಿರೋಧಪಕ್ಷದ ನಾಯಕ
ಅಶೋಕ್ ಗೆ ಈ ವಿಷಯಗಳೆಲ್ಲಾ ಅರ್ಥವೇ ಆಗಲ್ಲ. ಜೋಶಿ ಮತ್ತು ಶೋಭಾ ಕರಂದ್ಲಾಜೆ ರಾಜ್ಯದಿಂದ ಕೇಂದ್ರ ಮಂತ್ರಿಗಳಾಗಿದ್ದಾರೆ. 27 ಜನ ಸಂಸದರು ಸಂಸತ್ತಿನಲ್ಲಿ ಮಾತೇ ಆಡಿಲ್ಲ. ಜನ ಇವರನ್ನು ಆಯ್ಕೆ ಮಾಡಿ ಕಳುಹಿಸಿದರೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಇವರು ರಾಜ್ಯದ ಪರವಾಗಿ ಪಾರ್ಲಿಮೆಂಟಲ್ಲಿ ಬಾಯಿಯನ್ನೇ ಬಿಡುತ್ತಿಲ್ಲ. 11 ಸಾವಿರ ಕೋಟಿ ಕೇಂದ್ರ ಹಣಕಾಸು ಸಚಿವರಿಂದಲೇ ತಿರಸ್ಕಾರವಾಗಿದೆ. ರಾಜ್ಯದಿಂದ ಆಯ್ಕೆ ಆದ ನಿರ್ಮಲಾ ಸೀತಾರಾಮನ್ ರಿಂದಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ ಆಗಿದೆ.
ಪ್ರಧಾನಿ ಮೋದಿ ಅವರು ಸೂಕ್ಷ್ಮ ಇದ್ದಾರೆ, ಪ್ರತಿಭಟನೆ ಬಳಿಕವಾದರೂ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ ಕರ್ನಾಟಕದ ಪಾಲಿನ ಹಣವನ್ನು ವಾಪಾಸ್ ಕೊಡಬಹುದು ಎಂಬ ಆಶಾಭಾವನೆ ಇದೆ. ಮುಂಬರುವ ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸಲು ರಾಜ್ಯ ಸರ್ಕಾರವು ಚಿಂತನೆ ನಡೆಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.