ನವದೆಹಲಿ: ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ಸಹಿಸಲಾಗದು ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಅಂತಹ ಬೇಧ ಭಾವಕ್ಕೆ ಅವಕಾಶ ಮಾಡಿಕೊಡುವ ಜೈಲು ಕೈಪಿಡಿಯಲ್ಲಿರುವ ನಿಬಂಧನೆಗಳನ್ನು ರದ್ದು ಮಾಡಿದೆ.
ಜಾತಿ ಆಧರಿಸಿ ಜೈಲುಗಳಲ್ಲಿ ಕೆಲಸ, ಬ್ಯಾರಕ್ ಹಂಚಿಕೆ ಮಾಡುವ ಕಾರಾಗೃಹಗಳ ಕೈಪಿಡಿಯ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 11 ರಾಜ್ಯಗಳಲ್ಲಿ ಇದ್ದ ಇಂತಹ ಜೈಲು ಕೈಪಿಡಿ ನಿಬಂಧನೆಗಳನ್ನು ರದ್ದು ಮಾಡಲಾಗಿದೆ.
ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ತೊಡೆದು ಹಾಕಲು ಹಲವಾರು ಕ್ರಮಗಳನ್ನು ಪ್ರಕಟಿಸಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ರಾಜ್ಯಗಳು ತಮ್ಮ ಕಾರಾಗೃಹ ಕೈಪಿಡಿಯನ್ನು ಪರಿಷ್ಕರಿಸಿ ಇಂತಹ ಆಚರಣೆಗಳನ್ನು ಕೈಬಿಡಬೇಕು ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ.
ಸಿಜೆಐ ಡಿ.ವೈ. ಚಂದ್ರಚೂಟ್ ನೇತೃತ್ವದ ತ್ರಿಸದಸ್ಯಪೀಠ ಕಾರಾಗೃಹಗಳಲ್ಲಿ ಕೈದಿಗಳಿಗೆ ಕೆಲಸದ ಹಂಚಿಕೆ ಮತ್ತು ಅವರನ್ನು ಯಾವ ಕೊಠಡಿಯಲ್ಲಿ ಇರಿಸಬೇಕು ಎಂಬುದನ್ನು ಜಾತಿ ಆಧಾರದಲ್ಲಿ ನಿರ್ಧರಿಸುವುದನ್ನು ಒಪ್ಪಲಾಗದು ಎಂದು ಹೇಳಿದೆ.
ಕೆಲವು ರಾಜ್ಯಗಳ ಜೈಲು ಕೈಪಿಡಿಗಳು ಜಾತಿ ಆಧಾರಿತ ತಾರತಮ್ಯ ಪ್ರೋತ್ಸಾಹಿಸುತ್ತಿವೆ ಎಂದು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ. ಜೈಲುಗಳಲ್ಲಿ ಕೈದಿಗಳಿಗೆ ಅಮಾನವೀಯವಾಗಿ ಕೆಲಸ ನೀಡಿದಲ್ಲಿ, ಅಮಾನವೀಯವಾಗಿ ನಡೆಸಿಕೊಂಡಲ್ಲಿ ರಾಜ್ಯಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕೈದಿಗಳ ನಡುವೆ ತಾರತಮ್ಯ ಇರಬಾರದು ಜಾತಿ ಆಧರಿಸಿ ಅವರನ್ನು ವಿಂಗಡಣೆ ಮಾಡುವುದರಿಂದ ಸಂವಿಧಾನ 15ನೇ ಪರಿಚ್ಛೇದಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.