ದೀಪಗಳ ಹಬ್ಬ ದೀಪಾವಳಿ. ಕತ್ತಲೆಯನ್ನು ಹೊಡೆದೋಡಿಸಿ, ಬೆಳಕನ್ನು ಚೆಲ್ಲುವ ದೀಪಗಳು ನೋಡಲು ಚೆಂದ. ಜ್ಞಾನದ ಸಂಕೇತವಾದ ದೀಪಗಳನ್ನು ಬೆಳಗಿಸುವಾಗ ಪ್ರತಿ ದೀಪಕ್ಕೂ ಎರಡು ಬತ್ತಿಗಳನ್ನು ಹಾಕಬೇಕು ಎಂಬ ನಿಯಮ ಇದೆ. ಇದಕ್ಕೊಂದು ವಿಶೇಷ ಕಾರಣವೂ ಇದೆ.
ದೇವರ ಮನೆಗೆ ದೀಪದ ಬೆಳಕೇ ಶೋಭೆ. ಸಾಮಾನ್ಯವಾಗಿ ಎರಡು ದೀಪಗಳನ್ನು ದೇವರ ಮುಂದೆ ಬೆಳಗಿಸಲಾಗುತ್ತದೆ. ಪ್ರತಿ ದೀಪಕ್ಕೂ ಎರಡು ಬತ್ತಿಯ ಕಾರಣ ಇಷ್ಟೇ, ಎರಡು ದೀಪ ಅಥವಾ ಎರಡು ಬತ್ತಿ ಪತಿ ಪತ್ನಿಯ ಸ್ವರೂಪ.
ಪತಿ ಪತ್ನಿ ಜೊತೆಗಿದ್ದರೆ ಮನೆ ಎಂಬ ಭಾವನೆ ಮೂಡುತ್ತದೆ. ಇಲ್ಲಿ, ಗಂಡು ಹೆಣ್ಣು ಪ್ರತ್ಯೇಕ ವಾಸ ಮಾಡುತ್ತಿದ್ದರೆ ಅದು ಮನೆಯಲ್ಲ, ಕೇವಲ ರೂಮ್ ಅಷ್ಟೇ. ಹಾಗಾಗಿ ಮನೆಯ ಸಂಪೂರ್ಣ ಶ್ರೇಯೋಭಿವೃದ್ದಿಯ ಹೊಣೆ ಪತಿ ಪತ್ನಿಯದ್ದೇ.
ದೇವರ ಮುಂದೆ ಬೆಳಗೋ ಎರಡು ದೀಪಗಳು, ದೀಪದಲ್ಲಿ ಉರಿಯುವ ಎರಡು ಬತ್ತಿಗಳು ಕುಟುಂಬಕ್ಕಾಗಿ ತ್ಯಾಗ, ಸೇವೆಯನ್ನು ಪ್ರತಿನಿಧಿಸುತ್ತದೆ. ದೀಪದ ಬೆಳಕು ಅವರಿಬ್ಬರ ಪ್ರೀತಿಯ ಸಂಕೇತ. ಬೆಳಗುವ ದೀಪ ಹೇಗೆ ನೋಡಲು ಸುಂದರವೊ, ಹಾಗೆ ಪತಿ ಪತ್ನಿಯರ ಪ್ರೀತಿ ಬಾಂಧವ್ಯ ಕುಟುಂಬದ ಶ್ರೇಯಸ್ಸಿಗೆ ಕಾರಣ. ದೇವರಲ್ಲಿ ತಮ್ಮ ಈ ಬಾಂಧವ್ಯ ಗಟ್ಟಿಯಾಗಿರಲಿ, ಕುಟುಂಬ ವೃದ್ದಿಯಾಗಲಿ ಎಂಬ ಭಾವವೇ ದೀಪ ಬೆಳಗುವುದರ ಹಿಂದೆ ಇದೆ.