ಡೇಟಿಂಗ್ ಅನ್ನೋದು ಹದಿಹರೆಯದವರಿಗೆ ಒಂಥರಾ ಸ್ಪೆಷಲ್. ಅದರಲ್ಲೂ ಮೊದಲ ಡೇಟ್ ಅಂದ್ರೆ ಸಾಕಷ್ಟು ಸಂಭ್ರಮ ಮತ್ತು ಕುತೂಹಲ ಸಹಜ. ಆದ್ರೆ ಮೊದಲ ಬಾರಿ ಡೇಟಿಂಗ್ ಗೆ ಹೋಗುವ ಮುನ್ನ ಯುವಕರು ಕೆಲವೊಂದು ವಿಷಯಗಳನ್ನು ಗಮನಿಸಲೇಬೇಕು.
ಡೇಟಿಂಗ್ ಗೂ ಮೊದಲು ಹೇರ್ ಟ್ರಿಮ್ ಮಾಡಿಸಿಕೊಳ್ಳಿ. ನಿಮ್ಮ ಮುಖಕ್ಕೆ ಒಪ್ಪುವಂತಹ ಹೇರ್ ಸ್ಟೈಲ್ ಮಾಡಿಸಿದರೆ ಚೆನ್ನ. ತಲೆಯಲ್ಲಿ ಹೊಟ್ಟಿನ ಸಮಸ್ಯೆ ಇದ್ರೆ ತಜ್ಞರನ್ನು ಭೇಟಿಯಾಗಿ ಸೂಕ್ತ ಪರಿಹಾರ ಪಡೆಯಿರಿ.
ಅತಿಯಾಗಿ ಹೇರ್ ಜೆಲ್ ಬಳಸಬೇಡಿ. ನೀವು ಕೂದಲ ಬಗ್ಗೆ ಅತಿಯಾಗಿ ಕಾಳಜಿ ಮಾಡಿದ್ದೀರಿ ಎಂಬ ಭಾವನೆ ಮೂಡುತ್ತದೆ. ಕೂದಲು ಮೃದುವಾಗಿದ್ದಲ್ಲಿ ಸ್ವಲ್ಪವೇ ಜೆಲ್ ಬಳಸಿ ಸ್ಟೈಲ್ ಮಾಡಬಹುದು.
ನಿಮ್ಮದು ಒರಟು ಕೂದಲಾಗಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯಬಹುದು. ಡೇಟಿಂಗ್ ಹೋಗುವುದಕ್ಕೂ ಒಂದು ವಾರ ಮೊದಲೇ ಚಿಕಿತ್ಸೆ ಮಾಡಿಸಿಕೊಂಡು, ನಿಮಗೆ ಒಪ್ಪುವ ವಿನ್ಯಾಸವನ್ನು ಟ್ರೈ ಮಾಡಿ.
ಕೆಲವು ಯುವಕರು ಮುಖದ ಮೇಲಿರುವ ಕಪ್ಪು ಕಲೆಗಳನ್ನು ಅಲಕ್ಷಿಸುತ್ತಾರೆ. ಹೊರಗಡೆ ಓಡಾಡುವ ಸಂದರ್ಭದಲ್ಲಿ ಪುರುಷರು ಮುಖವನ್ನು ಮುಚ್ಚಿಕೊಳ್ಳುವುದಿಲ್ಲ. ಧೂಳು ಮತ್ತು ಹೊಗೆಯಿಂದಾಗಿ ಮುಖದ ಮೇಲೆ ಬ್ಲಾಕ್ ಹೆಡ್ಸ್ ಕಾಣಿಸಿಕೊಳ್ಳುತ್ತವೆ. ವಾರಕ್ಕೊಮ್ಮೆಯಾದ್ರೂ ಮುಖವನ್ನು ಸ್ಕ್ರಬ್ ಮಾಡಿಕೊಳ್ಳಿ.
ಹಣೆ, ಕೆನ್ನೆ ಮತ್ತು ಮೂಗಿನ ತುದಿಯಲ್ಲಿ ಎಣ್ಣೆ ಜಿಡ್ಡು ಕಾಣಿಸಿಕೊಂಡ್ರೆ ನಿಮ್ಮ ಲುಕ್ ಡಲ್ ಆಗುತ್ತದೆ. ತೀರಾ ಆಯಾಸಗೊಂಡಂತೆ ಕಾಣುತ್ತೀರಿ. ಹಾಗಾಗಿ ಬ್ಲೋಟಿಂಗ್ ಪೇಪರ್ ಅಥವಾ ಟಿಶ್ಯೂ ಇಟ್ಟುಕೊಂಡು ಎಣ್ಣೆಯನ್ನು ಸ್ವಚ್ಛ ಮಾಡಿ.
ಗಡ್ಡ ನಿಮಗಿಷ್ಟ ಅಂತಾದ್ರೆ ಅದನ್ನು ನೀಟ್ ಆಗಿ ಇಟ್ಟುಕೊಳ್ಳಿ. ಒಳ್ಳೆಯ ಶೇಪ್ ಕೊಟ್ಟು ಆಗಾಗ ಟ್ರಿಮ್ ಮಾಡಿ. ಉಗುರುಗಳನ್ನು ಕೂಡ ಸುಂದರ ಆಕಾರದಲ್ಲಿ ಕತ್ತರಿಸಿ ಸ್ವಚ್ಛವಾಗಿ ಇಟ್ಟುಕೊಳ್ಳಿ.
ಕೆಲವರಿಗೆ ಕೈ ಮತ್ತು ಕಾಲಿನ ಪಾದ ಬೆವರುತ್ತದೆ. ಅಂಥವರು ಡೇಟಿಂಗ್ ಹೋಗುವ ಮುನ್ನ ತಣ್ಣನೆಯ ನೀರಿನಲ್ಲಿ ಕೈಕಾಲು ತೊಳೆದುಕೊಳ್ಳಿ. ಸಾಕ್ಸ್ ಇಲ್ಲದೇ ಶೂ ಧರಿಸಬೇಡಿ. ಅಕಸ್ಮಾತ್ ಹಾಕಲೇಬೇಕು ಎನಿಸಿದರೆ ಶೂನಲ್ಲಿ ಸ್ವಲ್ಪ ಪೌಡರ್ ಉದುರಿಸಿಕೊಳ್ಳಿ.