ಭಾರತದ ಪ್ರಸಿದ್ಧ ಮಸಾಲೆಗಳ ಬ್ರಾಂಡ್ ಎವರೆಸ್ಟ್ ಮತ್ತು ಎಂಡಿಎಚ್‌ಅನ್ನು ಹಾಂಗ್‌ಕಾಂಗ್‌ನಲ್ಲೂ ನಿಷೇಧಿಸಲಾಗಿದೆ. ಈ ಹಿಂದೆ ಈ ಕಂಪನಿಯ ಮಸಾಲೆ ಪದಾರ್ಥಗಳ ಮೇಲೆ ಸಿಂಗಾಪುರದಲ್ಲಿ ನಿಷೇಧ ಹೇರಲಾಗಿತ್ತು. ಅವುಗಳಲ್ಲಿ ಕಾರ್ಸಿನೋಜೆನಿಕ್ ಕೀಟನಾಶಕ ಎಥಿಲೀನ್ ಆಕ್ಸೈಡ್ ಕಂಡುಬಂದಿದೆ ಎಂದು ವರದಿಯಾಗಿದೆ. ಎಥಿಲೀನ್ ಆಕ್ಸೈಡ್ ಪ್ರಮಾಣವು ನಿಗದಿತ ಮಿತಿಗಿಂತ ಹೆಚ್ಚು ಕಂಡುಬಂದ ಹಿನ್ನೆಲೆಯಲ್ಲಿ ಸಿಂಗಾಪುರದಲ್ಲಿ ಎವರೆಸ್ಟ್ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ಬಳಿಕ ಹಾಂಗ್ ಕಾಂಗ್‌ನಲ್ಲೂ ಇವುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲಿನ ಆಹಾರ ಸುರಕ್ಷತಾ ಕೇಂದ್ರ, MDHನ ಮೂರು ಮಸಾಲೆಗಳಲ್ಲಿ ಎಥಿಲೀನ್ ಆಕ್ಸೈಡ್ ಇರುವುದಾಗಿ ಘೋಷಿಸಿದೆ. ಮದ್ರಾಸ್ ಕರಿ ಪುಡಿ, ಸಾಂಬಾರ್ ಮಸಾಲಾ ಪುಡಿಯಲ್ಲಿ ಅಪಾಯಕಾರಿ ಪದಾರ್ಥಗಳಿರುವುದು ಪತ್ತೆಯಾಗಿದೆ.
ಮೂರು ಚಿಲ್ಲರೆ ಮಾರಾಟ ಮಳಿಗೆಗಳಿಂದ ಮಸಾಲೆಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇವುಗಳಲ್ಲಿ ಕೀಟನಾಶಕ ಮತ್ತು ಎಥಿಲೀನ್ ಆಕ್ಸೈಡ್ ಕಂಡುಬಂದಿದೆ ಎಂದು ಪರೀಕ್ಷಾ ಫಲಿತಾಂಶಗಳು ಬಹಿರಂಗಪಡಿಸಿದವು. ಹಾಗಾಗಿ ಈ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಲು ಆದೇಶಿಸಲಾಯ್ತು. ಎವರೆಸ್ಟ್ ಕಂಪನಿಯ ಫಿಶ್ ಕರಿ ಮಸಾಲಾದಲ್ಲಿ ಕೀಟನಾಶಕ ಕಂಡುಬಂದಿತ್ತು.
ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಪ್ರಕಾರ, ಎಥಿಲೀನ್ ಆಕ್ಸೈಡ್ ಗ್ರೂಪ್ 1 ಕಾರ್ಸಿನೋಜೆನ್ ಆಗಿದೆ. ಇದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ. ಇದನ್ನು ಸೇವನೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ.
ಈ ಮಸಾಲೆಗಳು ಮನುಷ್ಯರ ಬಳಕೆಗೆ ಯೋಗ್ಯವಲ್ಲ ಎಂದು ಸಿಂಗಾಪುರ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಎವರೆಸ್ಟ್ 50 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸವಿರುವ ಹಳೆಯ ಬ್ರಾಂಡ್. ಎಲ್ಲಾ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಳುಹಿಸುವ ಮೊದಲು ಕಾರ್ಖಾನೆಯಲ್ಲಿ ಪರಿಶೀಲಿಸಲಾಗುತ್ತದೆ ಎಂಬುದು ಕಂಪನಿಯ ವಾದ. ನಿಗದಿಪಡಿಸಿದ ಉನ್ನತ ಮಟ್ಟದ ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದಾಗಿ ಕಂಪನಿ ಹೇಳಿಕೊಂಡಿದೆ.