ನವಜಾತ ಶಿಶುಗಳಿಗಾಗಲಿ ಅಥವಾ ಚಿಕ್ಕ ಮಕ್ಕಳಿಗಾಗಲಿ ಸಕ್ಕರೆ ಕೊಡಬಾರದು. ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿಗಳ ಪ್ರಕಾರ ಶಿಶುಗಳಿಗೆ ಸಕ್ಕರೆಯನ್ನು ಶಿಫಾರಸು ಮಾಡುವುದಿಲ್ಲ. ಹೆಚ್ಚುವರಿ ಸಕ್ಕರೆಯು ಶಿಶುಗಳಲ್ಲಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಮಧುಮೇಹದಂತಹ ಕಾಯಿಲೆಗಳಿಗೂ ಕಾರಣವಾಗುತ್ತದೆ.
ಸಕ್ಕರೆಯ ಸೇವನೆ ಮಕ್ಕಳಿಗೆ ಸಾಮಾನ್ಯ ವಿಷಯವೆನಿಸುತ್ತದೆ, ಆದರೆ ಪೋಷಕರು ಅದರ ಹಾನಿಕಾರಕ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬೇಕು. ಮಗುವಿಗೆ ಸಕ್ಕರೆ ಅಥವಾ ಅದರಿಂದ ಮಾಡಿದ ಪದಾರ್ಥಗಳನ್ನು ನೀಡುತ್ತಿದ್ದರೆ ಇದನ್ನೊಮ್ಮೆ ಓದಲೇಬೇಕು.
ತೂಕ ಹೆಚ್ಚಳ ಮತ್ತು ಬೊಜ್ಜು
ನವಜಾತ ಶಿಶುಗಳ ಆಹಾರದಲ್ಲಿ ಸಕ್ಕರೆಯನ್ನು ಬೆರೆಸುವುದು ಅವರ ಬೆಳವಣಿಗೆಗೆ ಹಾನಿಕಾರಕ. ಸಕ್ಕರೆಯು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರಿಂದಾಗಿ ದೇಹದ ಶಕ್ತಿಯ ಅಗತ್ಯಗಳನ್ನು ಪೂರೈಸಲಾಗುವುದಿಲ್ಲ ಮತ್ತು ಕ್ಯಾಲೋರಿಗಳ ರೂಪದಲ್ಲಿ ದೇಹದಲ್ಲಿ ಅದು ಸಂಗ್ರಹವಾಗುತ್ತದೆ. ಪರಿಣಾಮ ಮಗುವಿನ ತೂಕವು ವೇಗವಾಗಿ ಹೆಚ್ಚಾಗುತ್ತದೆ, ಇದು ಭವಿಷ್ಯದಲ್ಲಿ ಸ್ಥೂಲಕಾಯತೆಗೆ ಕಾರಣವಾಗಬಹುದು.
ಹಲ್ಲಿನ ಕ್ಷಯ
ಸಕ್ಕರೆಯು ಹಲ್ಲುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನವಜಾತ ಶಿಶುಗಳು ಸಕ್ಕರೆಯನ್ನು ಸೇವಿಸುವುದರಿಂದ ಅವರ ಹಲ್ಲಿನ ದಂತಕವಚವನ್ನು ದುರ್ಬಲಗೊಳ್ಳುತ್ತದೆ. ಅಷ್ಟೇ ಅಲ್ಲ ಹಲ್ಲುಗಳಲ್ಲಿ ಹುಳುಕಿನ ಅಪಾಯವೂ ಹೆಚ್ಚಾಗುತ್ತದೆ.
ಕಳಪೆ ಜೀರ್ಣಕ್ರಿಯೆ
ಸಕ್ಕರೆ ಸೇವನೆ ಶಿಶುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಹೊಟ್ಟೆಯಲ್ಲಿ ಗ್ಯಾಸ್, ಉಬ್ಬರಿಸುವಿಕೆ ಅಥವಾ ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ
ಸಕ್ಕರೆ ಸಹ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೆಚ್ಚಿನ ಪ್ರಮಾಣದ ಸಕ್ಕರೆಯು ಮಗುವಿನ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಈ ಕಾರಣದಿಂದಾಗಿ ಮಗು ಬೇಗನೆ ಸೋಂಕು ಮತ್ತು ಕಾಯಿಲೆಗಳಿಗೆ ತುತ್ತಾಗಬಹುದು.
ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ
ನವಜಾತ ಶಿಶುಗಳ ಮಾನಸಿಕ ಬೆಳವಣಿಗೆಯ ಮೇಲೂ ಸಕ್ಕರೆ ಪರಿಣಾಮ ಬೀರುತ್ತದೆ. ಸಕ್ಕರೆಯ ಅತಿಯಾದ ಸೇವನೆ ಮಕ್ಕಳ ಮಾನಸಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಶೈಕ್ಷಣಿಕ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ.