ಅನೇಕರು ತೂಕ ಇಳಿಸಲು ಸಾಕಷ್ಟು ಕಸರತ್ತು ಮಾಡ್ತಾರೆ. ನಿಯಮಿತ ವ್ಯಾಯಾಮ, ಜಿಮ್, ಯೋಗಾಸನ, ಡಯಟ್ ಎಲ್ಲವನ್ನ ಪಾಲಿಸಿದರೂ ತೂಕ ಮಾತ್ರ ಇಳಿಯುವುದಿಲ್ಲ. ಯಾಕಂದ್ರೆ ಕೆಲವು ಕಾಯಿಲೆಗಳು ನಮ್ಮ ದೇಹ ತೂಕವನ್ನು ಕಳೆದುಕೊಳ್ಳದಂತೆ ತಡೆಯುತ್ತವೆ. ದೇಹದ ಚಯಾಪಚಯ ಮತ್ತು ಹಾರ್ಮೋನುಗಳ ಸಮತೋಲನಕ್ಕೆ ಅಡ್ಡಿಪಡಿಸುವ ಕೆಲವು ಆರೋಗ್ಯ ಸಮಸ್ಯೆಗಳಿವೆ.
ಈ ರೋಗಗಳು ದೇಹದ ಚಯಾಪಚಯವನ್ನು ನಿಧಾನಗೊಳಿಸುತ್ತವೆ, ಹಸಿವನ್ನು ಹೆಚ್ಚಿಸುವ ಮೂಲಕ ತೂಕವನ್ನು ಕಳೆದುಕೊಳ್ಳುವುದನ್ನು ತಡೆಯುತ್ತದೆ. ಇದರಿಂದಾಗಿ ತೂಕ ಕಡಿಮೆಯಾಗುವುದಿಲ್ಲ.
ಥೈರಾಯ್ಡ್
ಹೈಪರ್ ಥೈರಾಯ್ಡಿಸಮ್, ಥೈರಾಯ್ಡ್ ಹಾರ್ಮೋನ್‌ನಿಂದ ಉಂಟಾಗುವ ಕಾಯಿಲೆ. ಈ ಸಮಸ್ಯೆ ಇದ್ದರೆ ತೂಕವನ್ನು ಕಳೆದುಕೊಳ್ಳುವುದು ಕಷ್ಟವಾಗುತ್ತದೆ. ಥೈರಾಯ್ಡ್ ಹಾರ್ಮೋನ್ ಅಧಿಕವಾಗುವುದರಿಂದ ಜನರ ಬೊಜ್ಜು ಹೆಚ್ಚಾಗುತ್ತದೆ. ಥೈರಾಯ್ಡ್ ಸಮತೋಲನವಿಲ್ಲದೆ ದೇಹದ ತೂಕವು ಕಡಿಮೆಯೂ ಆಗಬಹುದು. ಅಥವಾ ಅಧಿಕವಾಗಿದ್ದರೂ ಅದನ್ನು ನಿಯಂತ್ರಿಸಲಾಗುವುದಿಲ್ಲ. ಆದ್ದರಿಂದ ಥೈರಾಯ್ಡ್ ಸಮಸ್ಯೆಯು ತೂಕ ನಷ್ಟಕ್ಕೆ ಒಂದು ಪ್ರಮುಖ ಅಡಚಣೆಯಾಗಿದೆ.
PCOS
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಈ ಸಮಸ್ಯೆ ಇರುವ ಮಹಿಳೆಯರ ದೇಹದಲ್ಲಿ ಇನ್ಸುಲಿನ್ ಎಂಬ ಹಾರ್ಮೋನ್ ಹೆಚ್ಚು ಇರುತ್ತದೆ. ಇನ್ಸುಲಿನ್ ಕಾರಣ ಆಹಾರದಿಂದ ಪಡೆದ ಕ್ಯಾಲೊರಿಗಳು ತ್ವರಿತವಾಗಿ ಕೊಬ್ಬಾಗಿ ಪರಿವರ್ತನೆಗೊಳ್ಳುತ್ತವೆ. ಅಂದರೆ ಬೊಜ್ಜು ಹೆಚ್ಚಾಗತೊಡಗುತ್ತದೆ.
ಇದಲ್ಲದೆ ಹಾರ್ಮೋನುಗಳ ಅಸಮತೋಲನದಿಂದಾಗಿ ಸಾಮಾನ್ಯ ದೇಹದ ಪ್ರಕ್ರಿಯೆಗಳು ಪಿಸಿಓಎಸ್‌ನಲ್ಲಿ ತೊಂದರೆಗೊಳಗಾಗುತ್ತವೆ. ಇವುಗಳಲ್ಲಿ ಚಯಾಪಚಯ ಕ್ರಿಯೆಯೂ ಒಂದು. ಈ ಎಲ್ಲಾ ಕಾರಣಗಳಿಂದ ಪಿಸಿಓಎಸ್ ಇರುವ ಮಹಿಳೆಯರು ತಮ್ಮ ಆಹಾರ ಕ್ರಮವನ್ನು ನಿಯಂತ್ರಣದಲ್ಲಿಟ್ಟುಕೊಂಡು ವ್ಯಾಯಾಮ ಮಾಡಿದರೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಕಾರ್ಟಿಕೊಸ್ಟೆರಾಯ್ಡ್‌ಗಳು
ಕಾರ್ಟಿಕೊಸ್ಟೆರಾಯ್ಡ್ ದೇಹದಲ್ಲಿ ಇರುವ ಒಂದು ರೀತಿಯ ಹಾರ್ಮೋನ್. ಇದು ಒತ್ತಡದ ಸಂದರ್ಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್ ಹೆಚ್ಚಾದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ತೂಕ ಹೆಚ್ಚಾಗುವುದು ಮತ್ತು ತೂಕ ನಷ್ಟ ಇವೆರಡೂ ಸಂಭವಿಸುತ್ತವೆ. ಕಾರ್ಟಿಕೊಸ್ಟೆರಾಯ್ಡ್‌ಗಳ ಕಾರಣದಿಂದಾಗಿ ತೂಕವನ್ನು ಕಳೆದುಕೊಳ್ಳಲು ತುಂಬಾ ಕಷ್ಟಪಡಬೇಕಾಗುತ್ತದೆ. ಹೆಚ್ಚುವರಿ ಕಾರ್ಟಿಕೊಸ್ಟೆರಾಯ್ಡ್ ಹೊಂದಿರುವ ಜನರು ಸುಲಭವಾಗಿ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಖಿನ್ನತೆ
ಖಿನ್ನತೆಯಿಂದ ಕೆಲವರ ಹಸಿವು ಕಡಿಮೆಯಾದರೆ ಇನ್ನು ಕೆಲವರು ಹೆಚ್ಚು ತಿನ್ನಲು ಆರಂಭಿಸುತ್ತಾರೆ. ಹೆಚ್ಚು ತಿನ್ನುವವರ ತೂಕ ವೇಗವಾಗಿ ಹೆಚ್ಚಾಗುತ್ತದೆ. ಖಿನ್ನತೆಯಿದ್ದರೆ ದೇಹದಲ್ಲಿ ‘ಸೆರೊಟೋನಿನ್’ ಎಂಬ ಹಾರ್ಮೋನ್ ಕಡಿಮೆಯಾಗುತ್ತದೆ. ಇದು ಹಸಿವು ಮತ್ತು ಮನಸ್ಥಿತಿಯನ್ನು ನಿಯಂತ್ರಿಸುತ್ತದೆ.