ವಿಟಮಿನ್ ಸಿ ದೇಹದ ಅಗತ್ಯ ವಸ್ತುಗಳಲ್ಲಿ ಒಂದು. ಜೀವಸತ್ವಗಳು ಅಗತ್ಯವಾದ ಪೋಷಕಾಂಶಗಳಾಗಿವೆ ಮತ್ತು ನಮ್ಮ ದೇಹವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು ಇವು ಅತ್ಯಗತ್ಯ. ಜೀವಸತ್ವಗಳನ್ನು ನೀರಿನಲ್ಲಿ ಕರಗುವ ಮತ್ತು ಕೊಬ್ಬಿನಲ್ಲಿ ಕರಗುವ ವಿಟಮಿನ್ ಎಂದು ವರ್ಗೀಕರಿಸಲಾಗಿದೆ.
ನೀರಿನಲ್ಲಿ ಕರಗುವ ವಿಟಮಿನ್ ಇದಾದ್ದರಿಂದ, ವಿಟಮಿನ್ ಸಿ ಯ ಅತಿಯಾದ ಸೇವನೆಯು ಸಾಮಾನ್ಯವಾಗಿ ಮೂತ್ರದ ಮೂಲಕ ಹೆಚ್ಚುವರಿ ಪ್ರಮಾಣವನ್ನು ಹೊರ ಹಾಕುತ್ತದೆ. ನೈಸರ್ಗಿಕ ಆಹಾರ ಮೂಲಗಳ ರೂಪದಲ್ಲಿ ಸೇವಿಸುವ ವಿಟಮಿನ್ ಸಿ ದೇಹದ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ. ವಿಟಮಿನ್ ಸಿ ಅನ್ನು ಮಾತ್ರೆಗಳ ರೂಪದಲ್ಲಿ ತೆಗೆದುಕೊಳ್ಳುವಾಗ ಮಾತ್ರ ಎಚ್ಚರವಿರಲಿ.
ಹಾಗಿದ್ದು ವಿಟಮಿನ್ ಸಿ ಪ್ರಮಾಣ ದೇಹದಲ್ಲಿ ಹೆಚ್ಚಾದರೆ ಈ ಲಕ್ಷಣಗಳು ಕಂಡು ಬರುತ್ತವೆ. ಮೊದಲನೆಯದಾಗಿ ಅತಿಸಾರ, ವಾಕರಿಕೆ, ಎದೆಯುರಿ, ಹೊಟ್ಟೆ ಸೆಳೆತ, ತಲೆನೋವು, ನಿದ್ರಾಹೀನತೆ ಕಂಡುಬರುತ್ತದೆ. ಇದರ ಪ್ರಮಾಣ ಹೆಚ್ಚಾದರೆ ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಸಾಧ್ಯತೆ ಇದೆ.
ಅತಿಯಾದ ವಿಟಮಿನ್ ಸಿ, ವಿಟಮಿನ್ ಬಿ 12 ಅನ್ನು ಹೀರಿಕೊಳ್ಳಲು ಅಡ್ಡಿಯಾಗಬಹುದು. ವಾಸ್ತವವಾಗಿ, ನೀವು ಈ ಎರಡೂ ವಿಟಮಿನ್ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವುಗಳ ನಡುವೆ ಸುಮಾರು 2 ಗಂಟೆಗಳ ಅಂತರವನ್ನು ಇಟ್ಟುಕೊಳ್ಳಿ. ಮೂಳೆಗಳ ಆರೋಗ್ಯಕ್ಕೆ ವಿಟಮಿನ್ ಸಿ ಅವಶ್ಯಕ. ಹಾಗೆಂದು ಇದನ್ನು ದೀರ್ಘ ಸಮಯದ ತನಕ ಸೇವಿಸುವುದರಿಂದ ಅಸ್ಥಿಸಂಧಿವಾತದ ಹೆಚ್ಚಳಕ್ಕೆ ಕಾರಣವಾಗಬಹುದು.