ದೇವರ ಪೂಜೆಗೆ ನಾವು ಸರ್ವಶ್ರೇಷ್ಠವಾದ ಪದಾರ್ಥಗಳನ್ನೇ ಆಯ್ಕೆ ಮಾಡುತ್ತೇವೆ. ಹೂವು, ಹಣ್ಣು, ನೈವೇದ್ಯ, ಪೂಜಾ ಸಲಕರಣೆಗಳು ಎಲ್ಲವೂ ಶುದ್ಧ ಹಾಗೂ ಚೊಕ್ಕವಾಗಿರುವಂತೆ ನಿಗಾ ವಹಿಸುತ್ತೇವೆ. ಯಾವುದೇ ಕಾರಣಕ್ಕೂ ಇದರಲ್ಲಿ ಲೋಪವಾಗಲು ಬಿಡುವುದಿಲ್ಲ. ಆದರೆ ಕೆಲವೊಂದು ಹೂವುಗಳು ಈ ವಿಚಾರಗಳಿಂದ ಸ್ವಲ್ಪ ಭಿನ್ನವಾಗಿದ್ದರೂ ದೇವರ ಪೂಜೆಯಲ್ಲಿ ಮೀಸಲಾಗಿವೆ.
ಪಾರಿಜಾತ
ಪಾರಿಜಾತ ಹೂವು ಅರಳಿದಾಕ್ಷಣ ನೆಲದ ಮೇಲೆ ಉದುರುತ್ತದೆ. ನೆಲದ ಮೇಲೆ ಉದುರಿದ ಯಾವುದೇ ಹೂವು ನಾವು ದೇವರಿಗೆ ಸಮರ್ಪಿಸುವುದಿಲ್ಲ. ಆದರೆ ಈ ನಿಯಮ ಪಾರಿಜಾತ ಪುಷ್ಪಕ್ಕೆ ಅನ್ವಯವಾಗುವುದಿಲ್ಲ. ನೆಲದ ಮೇಲೆ ಬಿದ್ದರೂ ದೇವರ ಮೂಡಿಗೇರುವ ಶ್ರೇಷ್ಠ ಪುಷ್ಪವೇ ದೇವಪುಷ್ಪ ಪಾರಿಜಾತ.
ಚೆಂಡು ಹೂವು
ಚೆಂಡು ಹೂವು ಹೆಚ್ಚಾಗಿ ಅಲಂಕಾರಿಕ್ಕೆ ಬಳಸಲಾಗುತ್ತದೆ. ಔಷಧೀಯ ಗುಣಗಳೂ ಹೊಂದಿರುವ ಚೆಂಡು ಹೂವಿನ ವಿಶೇಷತೆ ಅಂದರೆ ಈ ಹೂವಿನ ಪಕಳೆಗಳನ್ನು ಬಿಡಿಸಿ, ಕಟ್ಟಿ ಮಾಲೆಯಾಗಿ ದೇವರಿಗೆ ಅರ್ಪಿಸುತ್ತಾರೆ. ಸಾಮಾನ್ಯವಾಗಿ ಇಡಿಯಾದ ಹೂವನ್ನಷ್ಟೆ ದೇವರಿಗೆ ಅರ್ಪಿಸುವುದು. ಪಕಳೆಗಳಾಗಿ ಕಿತ್ತರೂ ದೇವರಿಗೆ ಸಲ್ಲುವ ಹೂವು ಚೆಂಡು ಹೂವು. ಉತ್ತರ ಭಾರತದಲ್ಲಿ ಇದರ ಬಳಕೆ ಜಾಸ್ತಿ.
ಸ್ಪಟಿಕದ ಹೂವು
ಬಿಳಿ, ಗುಲಾಬಿ, ನೀಲಿ, ಹಳದಿ ಬಣ್ಣದಲ್ಲಿ ಸ್ಪಟಿಕದ ಹೂವು ಲಭ್ಯ. ಬಹಳ ನಾಜೂಕಾದ ಹೂವಿದು. ಸ್ಪಟಿಕದ ಹೂವಿಗೆ ಯಾವುದೇ ಸುವಾಸನೆ ಇಲ್ಲ. ಕೇವಲ ಬಣ್ಣದಿಂದ ಆಕರ್ಶಿಸುವ ಹೂವು ಇದು. ಸುವಾಸನೆಯೇ ಇಲ್ಲದೆ ಹೋದರೂ ದೇವರ ಪೂಜೆಗೆ ಇದು ಮೀಸಲು. ನೀಲಿ ಸ್ಪಟಿಕದ ಹೂವು ವಿಶೇಷವಾಗಿ ಶನಿ ಮಹಾತ್ಮನಿಗೆ ಬಹಳ ಪ್ರಿಯ.