ಪತಿ ವೃತ್ತಿಪರ ಭಿಕ್ಷುಕನಾಗಿದ್ದರೂ ಸಹ ಆತ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಲೇಬೇಕಾಗುತ್ತದೆ. ಪತ್ನಿಯನ್ನು ನೋಡಿಕೊಳ್ಳುವುದು ಪತಿಯಾದವನ ಹೊಣೆಗಾರಿಕೆ ಹಾಗೂ ಕರ್ತವ್ಯ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ವಿವರ: ಪತಿಯಿಂದ ವಿಚ್ಛೇದನ ಕೋರಿ ಮಹಿಳೆಯೊಬ್ಬರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ತಿಂಗಳಿಗೆ 15,000 ರೂಪಾಯಿ ಜೀವನಾಂಶ ಹಾಗೂ ಕೋರ್ಟ್ ವೆಚ್ಚವಾಗಿ 11 ಸಾವಿರ ರೂಪಾಯಿಗಳನ್ನು ನೀಡುವಂತೆ ಕೋರಿದ್ದರು.
ಇದರ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ, ಜೀವನಾಂಶವಾಗಿ ಪತ್ನಿಗೆ ಪ್ರತಿ ತಿಂಗಳು 5,000 ರೂಪಾಯಿ ಹಾಗೂ ಕೋರ್ಟ್ ವೆಚ್ಚ 5,500 ರೂಪಾಯಿಗಳನ್ನು ಪಾವತಿಸಲು ಪತಿಗೆ ಆದೇಶಿಸಿದ್ದು, ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದ. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದು, ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.